ರಮೇಶ್ ಸುರ್ವೆ ಅವರ "ಮಂದಾಕಿನಿ" ವೈಶಿಷ್ಠ್ಯಗಳು
ಗುರುವಾರ, 3 ಜನವರಿ 2008( 18:26 IST )
ರಮೇಶ್ ಸುರ್ವೆ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಮಂದಾಕಿನಿ ಹಲವು ವಿಶೇಷಗಳಿಂದ ಕೂಡಿದೆ.
ಈ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದರೆ ಒಂದು ಕನ್ನಡ ಕುರಿತಾದದ್ದು. ಚಿತ್ರದಲ್ಲಿ ಹತ್ತು ನಿಮಿಷವಿರುವ ಈ ಹಾಡನ್ನು ಹತ್ತುದಿನಗಳ ಕಾಲ ಚಿತ್ರೀಕರಣ ಮಾಡುವುದಾಗಿ ಸುರ್ವೆ ಹೇಳಿದ್ದಾರೆ. ಕರ್ನಾಟಕದ ಇತಿಹಾಸ, ಸಾಹಿತ್ಯ, ಜನಪದ, ಇವೆಲ್ಲರದರ ಬಗ್ಗೆ ವರ್ಣಿಸುವ ಈ ಹಾಡು ತುಂಬಾ ಸೊಗಸಾಗಿ ಮೂಡಿಬರಲಿದೆ ಎಂದು ಅವರು ಹೇಳಿದ್ದಾರೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರ ಹಾಡಿದ್ದಾರೆ. ಕನ್ನಡ ಪ್ರೀತಿ ಎಂದು ಆರಂಭವಾಗುವ ಈ ಹಾಡು ಈ ಚಿತ್ರದ ಹೈಲೆಟ್ ಎಂದು ಷೂಟಿಂಗ್ ನೋಡಿದವರು ಹೇಳುತ್ತಾರೆ. ನಿರ್ಮಾಪಕ ಶ್ರೀನಿವಾಸ್ ಅವರಿಗೆ ಕನ್ನಡದ ಬಗ್ಗೆ ಎಲ್ಲಿಲ್ಲದ ಒಲವು. ಹಾಗಾಗಿ ಈ ಹಾಡಿಗಾಗಿ ಎಷ್ಟು ಖರ್ಚಾದರೂ ಪರವಾಗಿಲ್ಲ, ನಾವಂದುಕೊಂಡಂತೆ ಮೂಡಬೇಕು ಎನ್ನುವುದು ಅವರ ನಿಲುವು.
ಈ ಚಿತ್ರದಲ್ಲಿ ಮತ್ತೊಂದು ವಿಶೇಷವಿದೆ. ಈ ಚಿತ್ರದ ನಿರ್ಮಾಪಕರು ಹಿಂದೆ ಒಂದು ಅಪಘಾತಕ್ಕೆ ಗುರಿಯಾಗಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಹಾಗಾಗಿ ಈ ಚಿತ್ರಕ್ಕಾಗಿ ದುಡಿಯುತ್ತಿರುವವರಿಗಾಗಿ ಶ್ರೀನಿವಾಸ್ ಆರೋಗ್ಯ ವಿಮೆ ಮಾಡಿಸಿದ್ದಾರೆ. ಪ್ರತಿಭಾವಂತ ನಿರ್ದೇಶಕ ನಾಗಾಭರಣ ಅವರ ಕೈಯಿಂದ ವಿಮೆ ಸಂಬಂಧಿತ ಪಾಲಿಸಿಗಳನ್ನು ಚಿತ್ರತಂಡಕ್ಕೆ ಕೊಡಿಸಿದ್ದಾರೆ.
ಈವರೆಗೆ 25 ಚಿತ್ರಗಳಲ್ಲಿ ನಟಿಸಿರುವ ಚೇತನ್ ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದ್ದು, ದುನಿಯಾದ ರಶ್ಮಿ ಈ ಚಿತ್ರದಲ್ಲಿ ಲೆಕ್ಚರರನ್ನು ಪ್ರೀತಿಸುವ ವಿದ್ಯಾರ್ಥಿನಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಥೆ, ನಿರ್ದೇಶನದ ಜೊತೆ ಈ ಚಿತ್ರಕ್ಕೆ ಎರಡು ಹಾಡುಗಳನ್ನು ಸುರ್ವೆ ಬರೆದಿದ್ದಾರೆ.