ನೆನಪಿರಲಿ ಚಿತ್ರದ ನಿರ್ದೇಶಕ ರತ್ನಜ ಅವರ ಹೊಂಗನಸು ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಜನವರಿ 18 ರಂದು ಚಿತ್ರವು ತೆರೆಕಾಣಲಿದೆ. ಚಿತ್ರದ ನಾಯಕನಾಗಿ ಪ್ರೇಮ್ ಅಭಿನಯಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಹೆಚ್ಚು ಮಾತನಾಡಿದ್ದು ಪ್ರೇಮ್. ಹೊಂಗನಸಿನ ಪಾತ್ರ, ಆ ಪಾತ್ರದ ಸಂಭಾಷಣೆ ಮತ್ತು ಇನ್ನೊಂದು ಪಾತ್ರದೊಂದಿಗೆ ನಡೆಸುವ ಸಂಭಾಷಣೆ ಎಷ್ಟೊಂದು ಪ್ರಭಾವಶಾಲಿಯಾಗಿದೆಯೆಂದರೆ ಈವರೆಗೆ ಮಾಡಿದ ಪಾತ್ರಕ್ಕಿಂತ ಈ ಪಾತ್ರ ವಿಭಿನ್ನವಾಗಿದೆ. ಕ್ಷಣಕ್ಷಣದ ಘಟನೆಯನ್ನು ಅನುಭವಿಸಿದ್ದೇವೆ ಎಂದು ಪ್ರೀತಿಯಿಂದ ಚಿತ್ರದ ಬಗ್ಗೆ ಮಾತನಾಡಿದರು.
ಪ್ರತಿ ಪಾತ್ರವೂ ಭಿನ್ನವಾಗಿದೆ. ಅತ್ತಿಗೆ ಪಾತ್ರವಂತೂ ಮನ ಕಲಕುವಂತಿದೆ. ಅದರಲ್ಲಿ ಬರುವ ದೃಶ್ಯಗಳು ಕಣ್ಣಿಗೆ ಕಟ್ಟುತ್ತಿವೆ ಎಂದು ಕಥೆಯ ಕುರಿತು ಹೇಳುವ ಪ್ರೇಮ್ ಇದು ಜೀವನದ ಮೈಲಿಗಲ್ಲು; ನಿಜಕ್ಕೂ ತನ್ನನ್ನು ನಾಯಕನಾಗಿ ಆರಿಸಿದ್ದಕ್ಕೆ ನಿರ್ದೇಶಕರಿಗೆ ಅಭಿನಂದಿಸಬೇಕು ಎನ್ನುತ್ತಾರೆ.
ಚಿತ್ರದ ಇನ್ನೋರ್ವ ನಟ ಅನಂತನಾಗ್ ಇದು ನಿರೀಕ್ಷಿತ ಚಿತ್ರ ಎಂದು ಆತ್ಮವಿಶ್ವಾಸದಿಂದ ಚಿತ್ರದ ಬಗ್ಗೆ ಮಾತನಾಡಿದರು. ದುರ್ಗಮ ಪ್ರದೇಶದಲ್ಲಿ ನಡೆಸಿದ ಚಿತ್ರೀಕರಣವಂತೂ ಭಯ ಹುಟ್ಟಿಸುತ್ತದೆ. ಐದರಿಂದ ಆರು ಸಾವಿರ ಅಡಿ ಎತ್ತರವಿರುವ ಪ್ರದೇಶದಲ್ಲಿ 40 ಅಡಿ ಕ್ರೇನನ್ನು ಕೊಂಡೊಯ್ದು ನಡೆಸಿದ ಚಿತ್ರೀಕರಣ ಒಮ್ಮೆಗೆ ಸಾಹಸ ಕಲಾವಿದರಾದ ನಮಗೆ ದಂಗು ಬಡಿಸಿತು ಎಂದು ಡ್ಯಾನಿ ಹೇಳುತ್ತಾರೆ. ಹಾಸ್ಯದ ಹೊಸ ಭಾಷೆ ಈ ಕಥೆಯಲ್ಲಿದೆ ಎನ್ನುತ್ತಾರೆ ನಟ ಶರಣ್.