ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿಕ್ಕ ಹಳ್ಳಿ ಚಿಕ್ಕನಾಯಕನಳ್ಳಿಯ ದೊಡ್ಡ ಸಾಧನೆ
ಸುದ್ದಿ/ಗಾಸಿಪ್
Feedback Print Bookmark and Share
 
ಕನ್ನಡ ಚಿತ್ರಗಳಿಗೆ ಸೀಮಿತ ಮಾರುಕಟ್ಟೆ. ಸಣ್ಣ ಸಣ್ಣ ಊರುಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳನ್ನು ಪ್ರದರ್ಶಿಸಿದರೆ ನಷ್ಟ ಕಟ್ಟಿಟ್ಟ ಬುತ್ತಿ. ಚಿತ್ರರಂಗ ಹೀಗಾದರೆ ಅಲ್ಲಿರುವ ಜನರು ಉತ್ತಮ ಚಿತ್ರಗಳನ್ನು ನೋಡುವಂತಾಗಲು ಏನು ಮಾಡಬೇಕು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಅಭಿವೃದ್ಧಿ ವಿಷಯದಲ್ಲಿ ಹಿಂದುಳಿರುವ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಚಿತ್ರೋತ್ಸವ ನಡೆಯುತ್ತಿದೆ. ಮೂಲತಃ ಚಿಕ್ಕನಾಯಕನಹಳ್ಳಿಯವರಾದ ಚಿತ್ರ ನಿರ್ದೇಶಕ ಲಿಂಗದೇವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಚಿತ್ರಗಳನ್ನು ತೋರಿಸಿ ಜನರಲ್ಲಿ ಹೊಸ ಅಭಿರುಚಿ ಹುಟ್ಟುಹಾಕುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿಯ ಎಸ್ಎಲ್ಎನ್ ಚಿತ್ರಮಂದಿರದಲ್ಲಿ ಕಳೆದ ವರ್ಷ ಡಿಸೆಂಬರ್ 23ರಿಂದ 28ರ ವರೆಗೆ ಎಂಟು ಶ್ರೇಷ್ಟ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲಾಯಿತು. ನಮ್ಮೂರ ಚಿತ್ರೋತ್ಸವ ಸಮಿತಿ ಇಂಥ ಚಿತ್ರ ಆಂದೋಲನ ನಡೆಸಿದ್ದು ಎರಡನೇ ಬಾರಿ. ಅಲ್ಲದೇ ತುರುವೇಕೆರೆ, ಗುಬ್ಬಿ ಮುಂತಾದ ಕಡೆಯೂ ನಮ್ಮೂರ ಚಿತ್ರೋತ್ಸವ ಯಶಸ್ಸು ಕಂಡಿದೆ.

ಜನರಲ್ಲಿ ಸದಭಿರುಚಿ ಮೂಡಿಸುವ ಇಂತಹ ಚಿತ್ರಗಳನ್ನು ನಾಡಿನ ಮೂಲೆಮೂಲೆಗೂ ಪರಿಚಯಿಸಿ ಸಾಮಾನ್ಯರಲ್ಲಿ ಕಲಾತ್ಮಕ ಚಿತ್ರಗಳ ಬಗ್ಗೆ ಅರಿವು ಮೂಡಿಸುವುದು ಈ ಆಂದೋಲನದ ಮುಖ್ಯ ಉದ್ದೇಶ. ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಚಿತ್ರೋತ್ಸವದಲ್ಲಿ ಕೇರಾಫ್ ಫುಟ್ಪಾತ್, ಮೊಗ್ಗಿನ ಜಡೆ, ಕಾಡುಬೆಳದಿಂಗಳು, ತುತ್ತೂರಿ, ಸೈನೈಡ್, ನಾಯಿ ನೆರಳು, ದಾಟು ಚಿತ್ರಗಳು ಪ್ರದರ್ಶನಗೊಂಡವು. ಪ್ರತಿದಿನ ಚಿತ್ರ ಪ್ರದರ್ಶನದ ನಂತರ ಆ ಚಿತ್ರದ ಬಗ್ಗೆ ಸಂವಾದ ಕಾರ್ಯಕ್ರಮಗಳು ಸಹಾ ನಡೆದವು.

ಆಯಾ ದಿನಗಳ ಚಿತ್ರೋತ್ಸವದ ಸುದ್ದಿಗಳನ್ನು ಪ್ರಕಟಿಸಲು ಚಿತ್ತಾರ ಎಂಬ ಪತ್ರಿಕೆಯನ್ನೂ ಪ್ರಕಟಿಸಲಾಗಿತ್ತು. ಸಿಂಡಿಕೇಟ್ ಬ್ಯಾಂಕ್ ನೆರವಿನೊಂದಿಗೆ ನಡೆದ ಚಿತ್ರೋತ್ಸವವನ್ನು ಎಸ್.ಎಲ್.ಭೈರಪ್ಪ ಅವರು ಉದ್ಘಾಟಿಸಿದರೆ, ಟಿ.ಎನ್. ಸೀತಾರಾಮ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಮಕೂರು ಜಿಲ್ಲೆಯ ಪ್ರೇಕ್ಷಕರಲ್ಲಿ ಹೊಸ ಅಭಿರುಚಿ ಬೆಳೆಸುತ್ತಿರುವ ನಮ್ಮೂರ ಚಿತ್ರೋತ್ಸವ ಸಮಿತಿ ಅಧ್ಯಕ್ಷ ಲಿಂಗದೇವರಿಗೆ ಹ್ಯಾಟ್ಸಾಫ್. ಹಾಗೆ ಅವರು ಇತರೆ ಜಿಲ್ಲೆಗಳಲ್ಲಿ ಈ ಆಂದೋಲನ ನಡೆಯುವಂತಾಗಲು ಮುಂದಾಗಲಿ ಎಂಬುದು ಎಲ್ಲರ ಆಶಯ.