ರಮೇಶ್ ಆಕ್ಸಿಡೆಂಟ್‌ಗೆ ಗಾಂಧಿನಗರದ ಮೆಚ್ಚುಗೆ
ಮಂಗಳವಾರ, 8 ಜನವರಿ 2008( 19:29 IST )
ಪ್ರತಿಭಾನ್ವಿತ ನಟ ರಮೇಶ್ ಈಗ ಉತ್ತಮ ನಿರ್ದೇಶಕರಾಗಿ ಸ್ಥಿತ್ಯಂತರಗೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಆಕ್ಸಿಡೆಂಟ್ ಬಗ್ಗೆ ಗಾಂಧಿನಗರ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಈಗಾಗಲೇ ಎರಡು ಹಾಸ್ಯಪ್ರಧಾನ ಚಿತ್ರಗಳನ್ನು ನಿರ್ದೇಶಿಸಿದ ರಮೇಶ್ ಈ ಬಾರಿ ಅದರ ವಿರುದ್ಧ ದಿಕ್ಕಿನಲ್ಲಿ ಸಾಗಿ ವಿಭಿನ್ನ ಚಿತ್ರವನ್ನು ಮಾಡುತ್ತಿದ್ದಾರೆ.
ಆಕ್ಸಿಡೆಂಟ್ ಎಂದರೆ ಎಲ್ಲರಿಗೂ ಕಣ್ಣುಮುಂದೆ ಸುಳಿಯುವುದು ರಕ್ತ, ಹೆಣ, ಜಜ್ಜಿಹೋದ ಕಾರು, ವಾಹನ ಇತ್ಯಾದಿ. ಆದರೆ ರಮೇಶ್ ಆಕ್ಸಿಡೆಂಟಿನಲ್ಲಿ ಜಗತ್ತಿನ ಸುಂದರ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ತನ್ನ ಪತ್ನಿಯನ್ನು ಕೊಲೆ ಮಾಡಿದವರನ್ನು ಒಂದು ಆಕ್ಸಿಡೆಂಟ್ ಮೂಲಕ ಪತ್ತೆ ಹಚ್ಚುತ್ತಾ ಹೋಗುತ್ತಾನೆ ನಾಯಕ. ಆತನಿಗೆ ಗೆಳೆಯರು ಸಹಾಯ ಮಾಡುತ್ತಾರೆ. ರೇಡಿಯೋ ಜಾಕಿ ಆಗಿದ್ದ ಚೈತನ್ಯ ಹೆಗಡೆ ಇಲ್ಲಿ ನಟರಾಗಿದ್ದರೆ, ಮತ್ತೊಬ್ಬ ಜಾಕಿ ಬಾಲಾಜಿ ಒಂದು ಪಾತ್ರ ಮಾಡುತ್ತಿದ್ದಾರೆ.
ಜಾಹೀರಾತು ಚಿತ್ರಗಳಿಗೆ ಜಿಂಗಲ್ಸ್ ಮಾಡುವ ಮೂಲಕ ಪ್ರಸಿದ್ಧರಾಗಿರುವ ರಿಕಿ ಕೇಜ್ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ. ರಮೇಶ್ ನಾಯಕನಾಗಿದ್ದ ಹೂಮಳೆ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಭಾಸ್ಕರ್ ಈ ಚಿತ್ರದ ಛಾಯಾಗ್ರಾಹಕ. ಡಬ್ಬಿಂಗ್ ನಡೆಯುತ್ತಿರುವ ಈ ಚಿತ್ರದ ಎರಡು ಹಾಡುಗಳ ಷೂಟಿಂಗ್ ನಡೆಯಬೇಕಿದೆ.