ಪಾಂಡು ಐ ಲವ್ ಯು 75
ಬೆಂಗಳೂರು, ಬುಧವಾರ, 9 ಜನವರಿ 2008( 15:41 IST )
ಮಾಸ್ಟರ್ ಹಿರಣ್ಣಯ್ಯ ಅವರು ತಾವು ಬೆಳಗ್ಗೆ ದಿನಪತ್ರಿಕೆಯಲ್ಲಿ ಓದಿದ ಸುದ್ದಿಯ ಅಂಶವನ್ನೇ ರಾತ್ರಿ ಆಡುವ ನಾಟಕದಲ್ಲಿ ಅಳವಡಿಸಿಕೊಂಡು ಪ್ರೇಕ್ಷಕರಿಗೆ ಹಾಸ್ಯವನ್ನು ಉಣಬಡಿಸುತ್ತಿದ್ದರು. ಹಾಗಾಗಿ ಅವರ ನಾಟಕಗಳು ನಿತ್ಯ ನೂತನವಾಗಿರುತ್ತಿದ್ದವು.
ಈ ತಂತ್ರವನ್ನೇ ಪಾಪ್ಯುಲರ್ ಲೇಖಕ ಎಂ.ಎಸ್.ನರಸಿಂಹಮೂರ್ತಿ ತಮ್ಮ ರಚನೆಯಲ್ಲಿ ಅಳವಡಿಸಿಕೊಂಡಿದ್ದಾರೆಯೇ? ಇಂಥದೊಂದು ಪ್ರಶ್ನೆ ಮೂಡಿದ್ದು ಪಾಂಡು ಐ ಲವ್ ಯು ಧಾರಾವಾಹಿಯ 75 ಕಂತುಗಳನ್ನು ಪೂರೈಸಿದ ಖುಷಿಗಾಗಿ ಸಿಹಿಕಹಿ ಚಂದ್ರು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ.
ತಾವು ರೂಪಿಸಿದ ಧಾರಾವಾಹಿಗಳಿಗೆ ಭಿನ್ನವಾಗಿ ಪಾಂಡು ಐ ಲವ್ ಯು ಸೀರಿಯಲ್ ರೂಪುಗೊಳ್ಳುತ್ತಿರುವ ಗುಟ್ಟನ್ನು ಅವರು ಬಿಟ್ಟುಕೊಟ್ಟರು.
20:20 ಕ್ರಿಕೆಟ್ ಮ್ಯಾಚ್‌ಗಳು ಬಂದವು. ಹಾಗೇ ಕರ್ನಾಟಕ ರಾಜಕೀಯದಲ್ಲಿ ಎರಡು ಪಕ್ಷಗಳು 20:20 ಆಡಳಿತ ನಡೆಸಿದವು. ಕೊನೆಯಲ್ಲಿ ಏನೋ ಎಡವಟ್ಟಾಗಿ ಬಿಜೆಪಿಗೆ ಅಧಿಕಾರ ಸಿಗದೇ ಹೋಯಿತು. ಅದನ್ನೇ ತಮ್ಮ ಧಾರಾವಾಹಿಯಲ್ಲಿ ಅಳವಡಿಸಿದರೇ ಹೇಗೆ ಎಂಬ ಉಪಾಯ ನರಸಿಂಹಮೂರ್ತಿಗೆ ಹೊಳೆಯಿತು.
ಪಾಂಡು ಐ ಲವ್ ಯು ನಲ್ಲಿ ಅದನ್ನು ಅಳವಡಿಸಲಾಯಿತು. ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದೂ ಆಯಿತು. ತಾವು ಹಿಂದೆ ಬರೆದ ಧಾರಾವಾಹಿಗಳ ಯಾವ ಕಂತಿನ ಸರಕನ್ನೂ ತಾವು ಮತ್ತೆ ಬಳಸದಿರುವುದರಿಂದಲೇ ಈ ಸೀರಿಯಲ್ ನಿತ್ಯ ನೂತನವಾಗಿದೆ ಎಂಬುದು ಅವರ ಅಭಿಪ್ರಾಯ.