ಗಾಯಕ ಗಾಯಕಿಯರಿಗೆ ಸುವರ್ಣ ಅವಕಾಶ
ಬೆಂಗಳೂರು, ಬುಧವಾರ, 9 ಜನವರಿ 2008( 15:46 IST )
ಕಂಠ ಚೆನ್ನಾಗಿದೆ, ಚೆನ್ನಾಗಿ ಸಿನಿಮಾ ಹಾಡುಗಳನ್ನು ಹಾಡುತ್ತಾನೆ, ಶಾಸ್ತ್ತ್ರೀಯ ಸಂಗೀತ ಕಲಿಯುತ್ತಿದ್ದಾನೆ, ಅವನಿಗೆ ಸಿನಿಮಾದಲ್ಲಿ ಹಾಡುವ ಆಸೆ. ಅದು ಹೇಗೆ ಸಾಧ್ಯವಾಗುತ್ತದೆ? ನಮ್ಮಂಥ ಬಡವರಿಗೆ ಯಾರು ಸಹಾಯ ಮಾಡುತ್ತಾರೆ ಎನ್ನುವುದು ಹಲವು ಪೋಷಕರು ತಮ್ಮ ಮಕ್ಕಳ ಬಗ್ಗೆ ಹೇಳುವ ಮಾತು.
ಪ್ರತಿಭೆ ಇದ್ದವರಿಗೆ ಸುವರ್ಣ ವಾಹಿನಿ ಒಂದು ಸುಸಜ್ಜಿತ ವೇದಿಕೆ ಒದಗಿಸಿಕೊಟ್ಟಿದೆ. ಕಾನ್ಪಿಡೆಂಟ್ ಸ್ಟಾರ್ ಸಿಂಗರ್ ಎಂಬ ಭರ್ಜರಿ ಸಂಗೀತ ಸ್ಪರ್ಧಾ ಕಾರ್ಯಕ್ರಮವನ್ನು ಈ ಚಾನೆಲ್ ಅದ್ದೂರಿಯಾಗಿ ನೀಡುತ್ತಿದೆ. ಯುವಕ ಯುವತಿಯರು ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕನ್ನಡ ಸಂಗೀತಲೋಕದಲ್ಲಿ ಉತ್ತಮ ಅವಕಾಶ ಪಡೆಯಲು ಸಜ್ಜಾಗುತ್ತಿದ್ದಾರೆ.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ, ಪ್ರಥಮ ಸ್ಥಾನ ಗಳಿಸಿದ ಒಬ್ಬರಿಗೆ 40 ಲಕ್ಷ ರೂ. ಮೌಲ್ಯದ ಒಂದು ಫ್ಲ್ಯಾಟ್ ನೀಡಲಾಗುತ್ತದೆ. ಇಷ್ಟೇ ಅಲ್ಲ. ವಿಜೇತರಿಗೆ ಗುರುಕಿರಣ್ ಅವರ ಮುಂದಿನ ಚಿತ್ರದಲ್ಲಿ ಹಾಡುವ ಅವಕಾಶವೂ ಸಿಗಲಿದೆ.
ಈಗಾಗಲೇ ಐವತ್ತು ಸಾವಿರ ಗಾಯಕ ಗಾಯಕಿಯರ ಸಾಮರ್ಥ್ಯ ಪರೀಕ್ಷೆ ನಡೆದು, ಅವರ ಪೈಕಿ 50 ಜನರನ್ನು ಆಯ್ಕೆ ಮಾಡಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮೊದಲ ಬಾರಿಗೆ ಇಂಥ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಅದ್ದೂರಿಯಾಗಿ ನಿರ್ಮಿಸಲಾದ ಸೆಟ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಹೆಸರಾಂತ ಗಾಯಕಿ ನಂದಿತಾ ಕೂಡಾ ಇವರೊಂದಿಗೆ ಇದ್ದಾರೆ.
ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಈ ಮೆಗಾ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿರುತ್ತಾರೆ. ನಮಗೆ ಇಂಥ ಅವಕಾಶ ಇರಲಿಲ್ಲ. ಗಾಯಕ ಗಾಯಕಿಯರಿಗೆ ಇದೊಂದು ಸುವರ್ಣ ಅವಕಾಶ. ಫ್ಲ್ಯಾಟ್ ಆಸೆ ಬಿಟ್ಟು ಪ್ರಾಮಾಣಿಕವಾಗಿ ತಮ್ಮ ಪ್ರತಿಭೆ ತೋರಬೇಕು ಎನ್ನುವುದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ ಸಲಹೆ.