ಚಿತ್ರದಲ್ಲಿ ಎಲ್ಲೂ ರಕ್ತದೋಕುಳಿಯಿಲ್ಲ. ತಂಪಾಗಿ ಇಂಪಾಗಿ ಪ್ರೇಕ್ಷಕರಿಗೆ ಮೆಚ್ಚುಗೆಯಾಬಹುದಾದ ಚಿತ್ರ ತಂಗಾಳಿ ಎನ್ನುತ್ತಾರೆ ನಿರ್ದೇಶಕ ಕೀರ್ತಿವರ್ಧನ್.
ಇತ್ತೀಚಿನ ಎಲ್ಲಾ ಚಿತ್ರಗಳಲ್ಲಿ ಕಂಡು ಬರುವುದು ಪ್ರೀತಿ. ಇದಕ್ಕೆ ಆದ್ಯತೆ ನೀಡುವವರೇ ಅಧಿಕ. ಆದರೆ ಈ ಚಿತ್ರವನ್ನು ಸ್ವಲ್ಪ ಡಿಫರೆಂಟ್ ಆಗಿ ಮಾಡಬೇಕೆಂಬ ಉದ್ದೇಶದಿಂದ ಅಮ್ಮನ ಸೆಂಟಿಮೆಂಟನ್ನು ನೀಡಿದ್ದಾರೆ. ಚಿತ್ರ ಲವ್‌ಸ್ಟೋರಿಯಾದರೂ ಅಮ್ಮನನ್ನು ಪ್ರೊಜೆಕ್ಟ್ ಮಾಡಲು ಪ್ರಯತ್ನಿಸಿದ್ದಾರೆ. ಪ್ರೀತಿ ಎಷ್ಟು ಮುಖ್ಯವೋ ಅಮ್ಮ ಕೂಡ ಅಷ್ಟೇ ಮುಖ್ಯ ಎನ್ನುವುದು ನಿರ್ದೇಶಕ ಕೀರ್ತಿವರ್ಧನ್ ಮಾತು.
ಸಿನಿಮಾ ನಿರ್ದೇಶಕರ ಜೊತೆಗೆ ಕಿರುತೆರೆ ನಿರ್ದೇಶಕ ಸುನೀಲ್ ಪುರಾಣಿಕ್, ಬಿ.ಸುರೇಶ್ ಮೊದಲಾದವರ ಜೊತೆ ಅನುಭವ ಪಡೆದುಕೊಂಡೆ ಈ ಚಿತ್ರಕ್ಕೆ ಕೈ ಹಾಕಿದ್ದಾರೆ ಕೀರ್ತಿವರ್ಧನ್.
ಇನ್ನು ಚಿತ್ರದ ನಾಯಕನ ಕುರಿತು ಹೇಳುವುದಾದರೆ ಕರ್ಣನ ಪಾತ್ರ ಮಾಡಿ, ಪೌರಾಣಿಕ ನಾಟಕಗಳ ಬಗ್ಗೆ ಹೆಚ್ಚು ಒಲವು ತೋರಿಸಿದ್ದ ರಾಮ್‌ನಾಯಕ್ ಇಲ್ಲಿ ನಾಯಕನಾಗಿದ್ದಾರೆ. ರಾಜ್‌ಕುಮಾರ್ ಸಿನಿಮಾಗಳಿಂದ ಅಭಿನಯದ ಪಾಠ ಕಲಿತಿದ್ದ ರಾಮ್‌ಗೆ ಇದೇನೂ ಕಷ್ಟವೆನಿಸಿಲ್ಲವಂತೆ.
ದಿವ್ಯಾ ಶ್ರೀಧರ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಾಚಾ ಮತ್ತು ಹೈಸ್ಕೂಲ್ ಚಿತ್ರಗಳಲ್ಲಿ ನಾಯಕಿ ಪಾತ್ರಗಳಲ್ಲಿ ಅಭಿನಯಿಸಿದ ಅನುಭವ ಇವರಿಗಿದೆ. ಚಿತ್ರದಲ್ಲಿನ ಎಲ್ಲಾ ಆರು ಹಾಡುಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ ಎಂಬುದು ಚಿತ್ರಕ್ಕೆ ಸಂಗೀತ ಸಂಯೋಜಿಸಿದ ಆರ್ಯರವರ ಮಾತು.
ಚಿತ್ರೀಕರಣವನ್ನು ಮಡಿಕೇರಿ, ಸಕಲೇಶಪುರ ಮತ್ತು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.