ಪ್ರಗತಿಯಲ್ಲಿ ನನ್ನೆದೆಯ ಹಾಡು ಚಿತ್ರ
ಬೆಂಗಳೂರು, ಶನಿವಾರ, 12 ಜನವರಿ 2008( 13:39 IST )
ಟಿವಿ ನಿರೂಪಕರು ಚಿತ್ರನಟರಾಗಬಹುದು ಹಾಗೂ ಬಿಗಿಪಟ್ಟು ಹಿಡಿದು ಸಾಧಿಸಿದರೆ ಯಶಸ್ಸು ನಿಶ್ಚಿತ ಎಂದು ಸಾಧಿಸಿ ತೋರಿಸಿದವರು ಕಾಮಿಡಿ ಟೈಂ ಗಣೇಶ್. ಚೆಲ್ಲಾಟ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ ಅವರದ್ದು ಈಗ ಎಂಥಾ ಟ್ರಾಕ್ ರೆಕಾರ್ಡ್ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಈಗ ಅವರ ಹಾದಿಯಲ್ಲೇ ಸಾಗುತ್ತಿರುವವರು ಕಿರುತೆರೆ ವಾಹಿನಿಯೊಂದರ ನಿರೂಪಕ ಆನಂದ್. ವಿಶೇಷವೆಂದರೆ ಇವರು ನಾಯಕರಾಗಿ ನಟಿಸಿರುವ ಮನಸುಗಳ ಮಾತು ಮಧುರ ಇನ್ನೂ ಬಿಡುಗಡೆಯೇ ಆಗಿಲ್ಲ. ಅದರೆ ಮತ್ತೊಂದು ಚಿತ್ರದಲ್ಲಿ ಅಭಿನಯಿಸುವ ಸೌಭಾಗ್ಯ ಅವರಿಗೆ ಒದಗಿ ಬಂದಿದೆ. ಆ ಚಿತ್ರ ನನ್ನೆದೆಯ ಹಾಡು.
ತನ್ನ ಪ್ರೇಯಸಿಗೆ ನಾಯಕ ಹೊಸ ವರ್ಷದ ಕುರುಹಾಗಿ ಹೊಸರಾಗದ ಕಾಣಿಕೆಯನ್ನು ನೀಡುವ ಸನ್ನಿವೇಶದ ಚಿತ್ರಣವನ್ನು ತೀರ್ಥಹಳ್ಳಿಯ ಹಳೆಯ ಮನೆಯೊಂದರಲ್ಲಿ ಚಿತ್ರೀಕರಿಸಲಾಯಿತು. ಸಂಗೀತಗಾರ ರಮೇಶ್ ಭಟ್ ಅವರ ಬಳಿ ಸಂಗೀತ ಕಲಿಯಲು ಬರುವ ಆನಂದ್ ಗುರುಪುತ್ರಿ ರಮ್ಯಾ ಬಾನರ್‌ಗೆ ಮನಸೋತು ಉಡುಗೊರೆ ನೀಡುವ ಅಂಶ ಈ ಸನ್ನಿವೇಶದಲ್ಲಿ ಅಡಕವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದ ಇತರ ತಾರಾಗಣದಲ್ಲಿ ಸಹನಾ, ಕರಿಬಸವಯ್ಯ, ಸುರೇಶ್, ಅರುಣ್‌ಕುಮಾರ್ ಮೊದಲಾದವರು ಇದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಾಹಣ, ಎ.ಟಿ.ರವೀಶ್ ಸಂಗೀತವಿರುವ ಈ ಚಿತ್ರದ ನಿರ್ದೇಶಕರು ಗುರುವೇಂದ್ರ.