ತಬ್ಬಲಿ ಚಿತ್ರಕ್ಕೆ ಭರದಿಂದ ಚಿತ್ರೀಕರಣ
ಬೆಂಗಳೂರು, ಶನಿವಾರ, 12 ಜನವರಿ 2008( 13:40 IST )
ತಬ್ಬಲಿ ಎಂದ ತಕ್ಷಣ ನೆನಪಿಗೆ ಬರುವುದು ಖ್ಯಾತ ಲೇಖಕ ರಾಘವೇಂದ್ರ ಖಾಸನೀಸರು ಬರೆದಿರುವ ತಬ್ಬಲಿಗಳು ಕಥೆ. ಆದರೆ ಇದಕ್ಕೂ, ನಾವೀಗ ಹೇಳ ಹೊರಟಿರುವ ಸುದ್ದಿಗೂ ಸಂಬಂಧವಿಲ್ಲ.
ಎನ್.ಲೋಕಿ ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ, ಎಚ್.ಎಸ್.ಹರೂನ್ ನಿರ್ಮಾಣದ ತಬ್ಬಲಿ ಚಿತ್ರಕ್ಕೆ ಮೈಸೂರಿನ ಕೊಳಗೇರಿಯೊಂದರಲ್ಲಿ ಇತ್ತೀಚೆಗೆ ಹೊಡೆದಾಟದ ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಜೊತೆಗೆ ಹಾಡಿನ ಭಾಗದ ಚಿತ್ರೀಕರಣವೂ ಸಾಗಿದೆ ಎಂಬುದು ಚಿತ್ರತಂಡದ ಹೇಳಿಕೆ. ಇನ್ನೂ ಒಂದು ತಿಂಗಳ ಕಾಲ ತಂಡವು ಮೈಸೂರಿನಲ್ಲಿಯೇ ಬೀಡು ಬಿಡಲಿರುವುದು ಮತ್ತೊಂದು ವಿಶೇಷ.
ಆಕಾಶ್, ಮೇಘಶ್ರೀ, ಮೀನಾಕ್ಷಿ ಅತ್ರಿ, ಟಿವಿ-9 ಸೂರಿ ಮೊದಲಾದ ಹೊಸಮುಖಗಳೇ ತುಂಬಿರುವ ಈ ಚಿತ್ರದಲ್ಲಿ ಸಾಧುಕೋಕಿಲಾ ಹಾಗೂ ಚಾರುಲತಾ ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮೂಗೂರು ಸುಂದರಂ ನೃತ್ಯ, ಎ.ವಿ.ಕೃಷ್ಣಕುಮಾರ್ ಛಾಯಾಗ್ರಾಹಣ, ನೀಲ್ ಸಂಗೀತ ಚಿತ್ರಕ್ಕಿದೆ.