ಜಮಾನ ಇನ್ನೇನು ಮುಗಿಯಲಿದೆ
ಬೆಂಗಳೂರು, ಸೋಮವಾರ, 14 ಜನವರಿ 2008( 15:08 IST )
ಜಗ್ಗೂದಾದ ಎಂದೇ ಹೆಸರಾದ ಖ್ಯಾತ ಹಿಂದಿ ಚಿತ್ರನಟ ಜಾಕಿ ಶ್ರಾಫ್ ಕೇರಾಫ್ ಫುಟ್ಪಾತ್ ಚಿತ್ರದಲ್ಲಿ ನಟಿಸುವಾಗ, ಅವಕಾಶ ಸಿಕ್ಕರೆ ಮತ್ತು ಕಥೆ ಚೆನ್ನಾಗಿದ್ದರೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸಲಿಕ್ಕೇನೂ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದ್ದರು. ಅದಕ್ಕೀಗ ಸಮಯ ಒದಗಿಬಂದಿದ್ದು, ಅವರ ಅಭಿನಯದ ಮತ್ತೊಂದು ಕನ್ನಡ ಚಿತ್ರದ ಬಿಡುಗಡೆಗೆ ಎಲ್ಲ ರೀತಿಯ ತಯಾರಿಗಳೂ ನಡೆಯುತ್ತಿವೆ.
ಮೈಸೂರು ಟೂರಿಂಗ್ ಟಾಕೀಸ್ ಎಂಬ ಆಕರ್ಷಕ ಹೆಸರಿನ ಲಾಂಛನದಲ್ಲಿ ಮೈಸೂರಿನ ಎಸ್.ಚೇತನ್ ನಿರ್ಮಿಸುತ್ತಿರುವ ಜಮಾನ ಚಿತ್ರದ ಪಾತ್ರವೊಂದರಲ್ಲಿ ಜಾಕಿಶ್ರಾಫ್ ಅಭಿನಯಿಸಿದ್ದು ಅದರ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ನಿತಿನ್, ಆಕರ್ಶರಂತಹ ಹೊಸ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ಕಲ್ಪಿಸಲಾಗಿದ್ದು ಬಂಗಾಳಿ ನಟ ವಿನೋದ್‌ಕುಮಾರ್ ಸಹ ಈ ಚಿತ್ರದಲ್ಲಿರುವುದು ಮತ್ತೊಂದು ವಿಶೇಷ. ಪೋಷಕ ಪಾತ್ರಗಳ ಮೂಲಕ ಇವರಿಗೆ ಸಾಥ್ ನೀಡುತ್ತಿರುವವರು ಭರತ್ ಭಾಗವತರ್, ಸುಂದರ್ರಾಜ್, ಮಾಲತಿ ಸರ್ದೇಶ್ಪಾಂಡೆ, ಲಯೇಂದ್ರ ಮೊದಲಾದವರು.
ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತವರು ಲಕ್ಕೀ ಶಂಕರ್. ನಿರಂಜನ್ ಛಾಯಾಗ್ರಹಣ ನಿರ್ವಹಿಸಿದ್ದರೆ, ಕಾರ್ತಿಕ್‌ರಾಜಾ ಸಂಗೀತ ನೀಡಿದ್ದಾರೆ. ಸಂಕಲನ ಆರ್.ಡಿ.ರವಿಯವರದ್ದು ಮತ್ತು ಸಹನಿರ್ದೇಶನ ಸುನೀಲ್ ಕುಮಾರ್ ಅವರದ್ದು.