ಇದ್ರೆ ಗೋಪಿ ಬಿದ್ರೆ ಪಾಪಿ ಮಾತಿನ ಮನೆಯಲ್ಲಿ
ಬೆಂಗಳೂರು, ಸೋಮವಾರ, 14 ಜನವರಿ 2008( 15:09 IST )
ಚಲನಚಿತ್ರದ ಶೀರ್ಷಿಕೆ ಕ್ಯಾಚಿಯಾಗಿದ್ದರೆ ಮೊದಲ ವಾರವೇ ಚಿತ್ರಮಂದಿರ ಹೌಸ್ಫುಲ್ ಆಗುತ್ತದೆ ಎಂಬುದು ಚಿತ್ರ ನಿರ್ಮಾಣ ವಲಯದವರ ಅಭಿಪ್ರಾಯ. ಎಷ್ಟೋ ಸಲ ಚಿತ್ರದ ಟೈಟಲ್‌ಗಳಿಗೆಂದೇ ಸಾಕಷ್ಟು ತಲೆಕೆಡಿಸಿಕೊಳ್ಳುವುದುಂಟು.
ಟೈಟಲ್ ಸೂಚಿಸಿ ಎಂದು ಪತ್ರಿಕೆಯ ಮೂಲಕ ಚಿತ್ರಪ್ರೇಮಿಗಳಿಗೆ ಸೂಚಿಸುವುದುಂಟು. ಇಂಥದೇ ಟೈಟಲ್ ಬೇಕು ಎಂದು ಕೆಲವೊಮ್ಮೆ ಹಲವು ನಿರ್ಮಾಪಕರ ನಡುವೆ ಜಗಳ ನಡೆದ ಉದಾಹರಣೆಗಳೂ ಇವೆ.
ಅಂಥ ವಿಚಿತ್ರ ಹೆಸರನ್ನು ಹೊಂದಿರುವ ಚಿತ್ರ ಇದ್ರೆ ಗೋಪಿ ಬಿದ್ರೆ ಪಾಪಿ. ಈ ಚಿತ್ರದ ಚಿತ್ರೀಕರಣವೆಲ್ಲಾ ಮುಗಿದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಚಿತ್ರದಲ್ಲಿ ಉಮಾಶ್ರೀ, ದೊಡ್ಡಣ್ಣ, ಬ್ಯಾಂಕ್ ಜನಾರ್ಧನ್, ಬಿರಾದಾರ್, ಮಿಮಿಕ್ರಿ ರಾಜಗೋಪಾಲ್ ಮೊದಲಾದ ಹಾಸ್ಯ ಕಲಾವಿದರ ದಂಡೇ ಇರುವುದನ್ನು ನೋಡಿದರೆ ಇದು ಪ್ರೇಕ್ಷಕರಿಗೆ ಹಾಸ್ಯದೂಟವನ್ನು ಉಣಬಡಿಸಲಿದೆ ಎಂದೇ ನೀರೀಕ್ಷಿಸಬಹುದಾಗಿದೆ.
ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಮಧುಸೂಧನ್, ಜಗದೀಶ್‌ರಾಜ್, ಬಿಂದುಶ್ರೀ ಮತ್ತು ಸ್ಪೂರ್ತಿಯವರು ನಟಿಸುತ್ತಿದ್ದು ಜಿ.ವಿ.ರಾಮರಾವ್ ಕಥೆ-ಚಿತ್ರಕಥೆ-ಸಂಭಾಷಣೆಯೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಗೌರಿ ವೆಂಕಟೇಶ್‌ರವರ ಛಾಯಾಗ್ರಹಣ, ರವಿಶೆಣೈರವರ ಸಂಗೀತ ಚಿತ್ರಕ್ಕಿದೆ. ಪ್ರಸಾದ್-ಕಪಿಲ್ ಜೋಡಿ ನೃತ್ಯ ನಿರ್ದೇಶನ ಮಾಡಿದ್ದು ಚಿತ್ರದ ಕುರಿತಾದ ನೀರೀಕ್ಷೆಯನ್ನು ಅದು ಹೆಚ್ಚಿಸಿದೆ.