ಡಿಟಿಎಸ್ ಅಳವಡಿಕೆಯಲ್ಲಿ ವಾರಸ್ದಾರ
ಬೆಂಗಳೂರು, ಮಂಗಳವಾರ, 15 ಜನವರಿ 2008( 14:02 IST )
ವಿಶಿಷ್ಟ ಮಾತುಗಾರಿಕೆಗೆ ಹೆಸರಾದ ಪತ್ರಕರ್ತ ರವಿ ಬೆಳಗೆರೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ವಾರಸ್ದಾರ ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯಗಳು ಸಂಪೂರ್ಣಗೊಂಡಿದ್ದು ಪ್ರೇಕ್ಷಕರಿಗೆ ವಿನೂತನ ಅನುಭವ ನೀಡುವ ದೃಷ್ಟಿಯಿಂದ ಡಿಟಿಎಸ್ ಲೇಪನಕ್ಕೆ ತನ್ನನ್ನು ಚಿತ್ರ ಒಡ್ಡಿಕೊಂಡಿದೆ. ಈ ಕಾರ್ಯ ಕರಿಸುಬ್ಬು ಮಾಲೀಕತ್ವದ ಬೆಂಗಳೂರಿನ ಬಾಲಾಜಿ ಡಿಜಿ ಸ್ಡುಡಿಯೋದಲ್ಲಿಯೇ ನಡೆಯುತ್ತಿರುವುದು ಮತ್ತೊಂದು ವಿಶೇಷ.
ಕ್ರೈಂಸ್ಟೋರಿಯಲ್ಲಿನ ವೀಕ್ಷಕ ವಿವರಣೆ, ಮುಕ್ತ ಧಾರಾವಾಹಿಯ ಜಡ್ಜ್ ಪಾತ್ರ, ಮತ್ತೆರಡು ಸೀರಿಯಲ್‌ಗಳಲ್ಲಿನ ವಿಶೇಷ ಪಾತ್ರಗಳು, ಎಂದೂ ಮರೆಯದ ಹಾಡು ಕಾರ್ಯಕ್ರಮದ ನಿರೂಪಕನಾಗಿ ಚಿತ್ರ ರಸಿಕರ ಮನಗೆದ್ದಿರುವ ರವಿ ಬೆಳಗೆರೆ ಈಗ ಗಿರಿಜಾ ಮೀಸೆಯ ವಾರಸ್ದಾರನಾಗಿ ಹೇಗೆ ಮಿಂಚಲಿದ್ದಾರೆ ಎಂಬುದು ಎಲ್ಲರನ್ನೂ ಕುತೂಹಲಿಗಳನ್ನಾಗಿ ಮಾಡಿದೆ.
ಅಶ್ವಿನಿ, ದತ್ತಣ್ಣ, ಸಂದೀಪ್, ಬಿ.ಪಿ.ಶ್ರೀನಿವಾಸ್, ದೀಲೀಪ್, ಅನು ಮೊದಲಾದವರು ನಟಿಸಿರುವ ಈ ಚಿತ್ರದ ನಿರ್ಮಾಪಕ-ನಿರ್ದೇಶಕರು ಗುರುದೇಶಪಾಂಡೆ. ಜಯಂತ್ ಕಾಯ್ಕಿಣಿ, ಕವಿರಾಜ್‌ರವರ ಸಾಹಿತ್ಯ, ಎಸ್. ಕುಮಾರ್ ಸಂಭಾಷಣೆ ಚಿತ್ರಕ್ಕಿದೆ.