ಅರಮನೆಗೆ ಈಡುಗಾಯಿ
ಬೆಂಗಳೂರು, ಬುಧವಾರ, 16 ಜನವರಿ 2008( 15:27 IST )
ಒಂದು ಕಾಲದಲ್ಲಿ ರೂಂಮೇಟ್‌ಗಳಾಗಿದ್ದ ನಾಗಶೇಖರ್ ಮತ್ತು ಕಾಮೆಡಿ ಟೈಂ ಗಣೇಶ್ ಈಗ ತಂತಮ್ಮ ಕಾರ್ಯಕ್ಷೇತ್ರದಲ್ಲಿ ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವ ವೃತ್ತಿಪರರಾಗಿಬಿಟ್ಟಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂರವರ ಮಗ ಚರಣ್ ನಾಯಕನಾಗಿ ನಟಿಸಿದ್ದ ಹುಡುಗಿಗಾಗಿ ಚಲನಚಿತ್ರದಲ್ಲಿ ಇವರಿಬ್ಬರೂ ಸಹನಟರ ಪಾತ್ರವಹಿಸಿದ್ದರು. ಇದಲ್ಲದೇ ಇನ್ನೂ ಹಲವು ಚಿತ್ರಗಳಲ್ಲಿ ಇವರು ಒಟ್ಟಾಗಿ ತೊಡಗಿಸಿಕೊಂಡದ್ದೂ ಇದೆ.
ಆದರೀಗ ಕಾಲ ಬದಲಾಗಿದೆ. ಗಣೇಶ್ ಈಗ ಕೈಗೆಟುಕದ ಮಟ್ಟಕ್ಕೇರಿರುವ ಗೋಲ್ಡನ್ ಸ್ಟಾರ್. ತಮ್ಮ ಮಿತ್ರನಿಗಾಗಿ ಕೊಟ್ಟಿದ್ದ ಕಾಲ್‌ಶೀಟ್ ಅರಮನೆ ಚಿತ್ರದ ಮೂಲಕ ಹೊರಬರುತ್ತಿದೆ. ಗಣೇಶ್ ಅಭಿನಯದ ಅರಮನೆ ಚಿತ್ರಕ್ಕೆ ನಾಗಶೇಖರ್ ಅವರದೇ ನಿರ್ದೇಶನ.
ಅರಮನೆಯ ಚಿತ್ರೀಕರಣ ಮುಗಿದಿದೆ. ಹೈದ್ರಾಬಾದ್‌ನಲ್ಲಿ ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿದ ತಂಡ ಬೆಂಗಳೂರಿಗೆ ವಾಪಾಸಾಗಿದೆ. ಸ್ಥಿರ ಛಾಯಾಗ್ರಾಹಕನ ಪಾತ್ರದಲ್ಲಿ ನಟಿಸಿರುವ ಗಣೇಶ್‌ಗೆ ನಾಯಕಿಯಾಗಿ ಬಂದಿರುವವರು ಮಲಯಾಳಂ ಬೆಡಗಿ ರೋಮಾ.
ಅಲ್ಲಿಗೆ ಕನ್ನಡ ಚಿತ್ರಕ್ಕೆ ಲಗ್ಗೆ ಹಾಕಿರುವ-ಹಾಕುತ್ತಿರುವ ಮಲಯಾಳಂ ಬೆಡಗಿಯರ ಸಂಖ್ಯೆ ದಿನೇ ದಿನೇ ಏರಿದಂತಾಗಿದೆ. ಈ ಹಿಂದೆ ಸುಚಿತ್ರಾ, ಶಿಲ್ಪಾ, ಚಾರುಲತಾ ನಟಿಸಿಹೋಗಿದ್ದರು. ನಂತರದ ಸರದಿ ಶ್ರೀದೇವಿಕಾರದ್ದು. ಇದೀಗ ಪಾರ್ವತಿ, ನವ್ಯಾನಾಯರ್‌ರವರ ಜೊತೆಗೆ ಮತ್ತೊಂದು ಸೇರ್ಪಡೆ ಈ ರೋಮಾ. ಲೋಕೋ ಭಿನ್ನ ರುಚಿಃ ಎಂದರೆ ಇದೇ ಇರಬಹುದೇ? ಮುಂಗಾರು ಮಳೆಯಲ್ಲಿ ಪ್ರೇಯಸಿಯ ತಂದೆಯ ಪಾತ್ರ ವಹಿಸಿದ್ದ ಅನಂತ್‌ನಾಗ್ ಇಲ್ಲಿ ಗಣೇಶನ ಅಪ್ಪನಾಗಿ ಅಭಿನಯಿಸಿದ್ದಾರೆ. ಫೆಬ್ರವರಿಯಲ್ಲಿ ಚಿತ್ರ ತೆರೆ ಕಾಣಲಿದೆ.