ಮಿಂಚಿನ ಓಟದಲ್ಲಿ ರಮೇಶ್
ಬೆಂಗಳೂರು, ಗುರುವಾರ, 17 ಜನವರಿ 2008( 11:40 IST )
ಸಾ.ರಾ.ಗೋವಿಂದು ನಿರ್ಮಿಸುತ್ತಿರುವ ಮಿಂಚಿನ ಒಟ ಚಿತ್ರವನ್ನು ಎ.ಎಂ.ಆರ್.ರಮೇಶ್ ನಿರ್ದೇಶಿಸುತ್ತಿದ್ದು ಈಗಾಗಲೇ ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ಅಂತಿಮ ಹಂತದ ಚಿತ್ರೀಕರಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
ಹಲವು ವರ್ಷಗಳ ಹಿಂದೆ ಇದೇ ಹೆಸರಿನ ಚಿತ್ರವನ್ನು ಶಂಕರ್ನಾಗ್ ನಿರ್ದೇಶಿಸಿದ್ದರು. ಅದರಲ್ಲಿ ಶಂಕರ್-ಅನಂತ್ ಸೋದರರು ನಟಿಸಿದ್ದರು. ಹೆಸರಿಗೆ ತಕ್ಕಂತೆ ಚುರುಕಾದ ನಿರ್ದೇಶನವನ್ನು ಹೊಂದಿದ್ದ ಈ ಚಿತ್ರವನ್ನು ಚಿತ್ರರಸಿಕರು ಇನ್ನೂ ಮರೆತಿಲ್ಲ. ಈಗ ಅದನ್ನು ಮತ್ತೊಮ್ಮೆ ನೆನೆಸುವಂತೆ ರಮೇಶ್ ನಿರ್ದೇಶನದ ಮಿಂಚಿನ ಓಟ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲೂ ಸಹೋದರರಾದ ವಿಜಯ್ ರಾಘವೇಂದ್ರ ಮತ್ತು ಶ್ರೀ ಮುರಳಿ ನಟಿಸುತ್ತಿರುವುದು ಚಿತ್ರದ ನೀರೀಕ್ಷೆಯನ್ನು ಹೆಚ್ಚಿಸಿದೆ.
ವಿಜಯ್ ರಾಘವೇಂದ್ರರೇನೋ ಒಂದು ನೆಲೆಯನ್ನು ಕಂಡುಕೊಂಡಿದ್ದಾರೆ. ಅದರೆ ಕೊಂಚ ಹಿನ್ನಡೆಯುಂಟಾಗಿರುವ ಮುರಳಿಗೆ ಈ ಚಿತ್ರ ಬೇಡಿಕೆ ತಂದುಕೊಡುವುದೇ ಎಂಬುದನ್ನು ಕಾದು ನೋಡಬೇಕಿದೆ. ಒಂದು ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿನ ಬಳುಕುವ ಬಳ್ಳಿಯಾಗಿದ್ದ ಸುಮನ್ ರಂಗನಾಥ್ ಈ ಚಿತ್ರದ ಐಟಂ ಸಾಂಗ್ ಒಂದರಲ್ಲಿ ನಟಿಸಿರುವುದು ಮತ್ತೊಂದು ವಿಶೇಷ.
ಚಿತ್ರದ ಇತರ ತಾರಾ ಬಳಗದಲ್ಲಿ ಲಕ್ಷ್ಮೀ ರೈ, ರಾಹುಲ್‌ದೇವ್, ರಂಗಾಯಣ ರಘು, ಸಾಧುಕೋಕಿಲಾ ಮುಂತಾದವರಿದ್ದಾರೆ.