ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಧ್ವನಿಸುರುಳಿ: ದೇಹವೇ ದೇಗುಲ
ಸುದ್ದಿ/ಗಾಸಿಪ್
Feedback Print Bookmark and Share
 
ಆಡಿಯೋ ಕ್ಯಾಸೆಟ್ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಕಂಡುಕೊಂಡಿರುವ ಸಂಸ್ಥೆ ಜಂಕಾರ್ ಮ್ಯೂಸಿಕ್. ಚಲನಚಿತ್ರ ಗೀತೆಗಳಷ್ಟೇ ಅಲ್ಲದೇ, ಭಕ್ತಿಗೀತೆಗಳು, ವಚನಗಳ ಕ್ಯಾಸೆಟ್‌ಗಳೆಡೆಗೂ ಸಂಸ್ಥೆ ಗಮನಹರಿಸುತ್ತಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿ.

ಇತ್ತೀಚೆಗೆ ಜಂಕಾರ್ ಹೊರ ತಂದಿರುವ ದೇಹವೇ ದೇಗುಲ, ಮನೆಗೆ ಬಾರೋ ಕೋಟಿಲಿಂಗೇಶ್ವರ ಹಾಗೂ ಹಲೋ ಬಾಬುಗೌಡ ಎಂಬ ಧ್ವನಿಸುರುಳಿಗಳಲ್ಲಿ ದೇಹವೇ ದೇಗುಲ ಎಲ್ಲರ ಮನಸೂರೆಗೊಳ್ಳುತ್ತದೆ.

12ನೇ ಶತಮಾನದಲ್ಲಿ ತಮ್ಮ ವಚನದೀಪ್ತಿಗಳ ಮೂಲಕ ವಿಶ್ವಕ್ಕೇ ಸಮಾನತೆ-ಭಕ್ತಿಗಳ ಬೆಳಕು ಚೆಲ್ಲಿದವರು ಬಸವಣ್ಣ, ಅಲ್ಲಮಪ್ರಭು, ಮುಪ್ಪಿನ ಷಡಕ್ಷರಿ, ಅಕ್ಕಮಹಾದೇವಿ ಹಾಗೂ ಚಾಮರಸ ಇವರೇ ಮೊದಲಾದ ಮಹಾನುಭಾವರು. ಇವರೆಲ್ಲರ ಆಯ್ದ ವಚನಗಳು ಈ ಆಲ್ಬಂನಲ್ಲಿರುವುದು ಇದರ ಮಹತ್ವವನ್ನು ಹೆಚ್ಚಿಸಿದೆ.

ಜಗವ ಸುತ್ತಿರುವುದು ಎಂಬ ಬಸವಣ್ಣನವರ ವಚನದೊಂದಿಗೆ ಧ್ವನಿಸುರುಳಿ ಆರಂಭವಾಗುತ್ತದೆ. ಉಳ್ಳವರು ಶಿವಾಲಯವ ಮಾಡುವರು, ಏನು ಬಂದಿರಿ, ಕಲ್ಯಾಣವೆಂಬ, ಎಲ್ಲ ಶರಣರ ನೆನೆದು, ಸುಪ್ರಭಾತ ಸಮಯದಲ್ಲಿ, ಇವೇ ಮೊದಲಾದ ಸರಳ-ಸುಂದರ ರಚನೆಗಳನ್ನು ಗಾಯಕ-ಗಾಯಕಿಯರಾದ ಮಾಸ್ಟರ್ ಶಿವಕುಮಾರ್ ಪಾಟೀಲ್ ಹಾಗೂ ಕುಮಾರಿ ಅಶ್ವಿನಿಯವರು ಅತ್ಯಂತ ಸುಲಲಿತವಾಗಿ ಹಾಡಿರುವುದು ಕೇಳುಗರ ಮನಸೂರೆಗೊಳ್ಳುತ್ತದೆ. ಡಾ| ನಂದಾ ಎಂ.ಪಾಟೀಲ್ ಹದವರಿತು ಸಂಗೀತ ಸಂಯೋಜನೆ ಮಾಡಿದ್ದರೆ, ಇದಕ್ಕೆ ಪೂರಕವಾಗಿ ಹಿತಮಿತವಾಗಿ ವಾದ್ಯ ಸಂಯೋಜನೆ ಮಾಡಿದ್ದಾರೆ ಡಿ.ಶ್ರೀನಿವಾಸ್.

ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಧ್ವನಿಸುರುಳಿ ಕೇವಲ 30 ರೂಪಾಯಿಗೇ ಲಭ್ಯ. ವಚನಗಳನ್ನು ಪ್ರೀತಿಸುವವರಿಗೆ-ಆರಾಧಿಸುವವರಿಗೆ ಇದೊಂದು ಸಂಗ್ರಹಯೋಗ್ಯ ಧ್ವನಿಸುರುಳಿ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ.