ಮತ್ತೆ ನವೀನಾಗಮನ
ಬೆಂಗಳೂರು, ಶುಕ್ರವಾರ, 18 ಜನವರಿ 2008( 13:58 IST )
ಈ-ಟಿವಿಯಲ್ಲಿ ಪ್ರಸಾರವಾಗುವ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯನ್ನು ನೀವು ಮೊದಲಿನಿಂದಲೂ ನೋಡಿದ್ದರೆ ಅದರಲ್ಲಿ ಮಲ್ಲಿಕಾಳ ಪ್ರೇಮಿಯಾಗಿ ಅಭಿನಯಿಸಿದ ಪಾತ್ರಧಾರಿಯನ್ನು ನೀವು ಮರೆಯಲು ಸಾಧ್ಯವೇ ಇಲ್ಲ (ಈಗ ಅಭಿನಯಿಸುತ್ತಿರುವವರು ಬೇರೆಯವರು). ಪಾತ್ರದ ಆಳವನ್ನು ಅರಿತು ಅತ್ಯಂತ ಸಹಜವಾಗಿ ಅಭಿನಯಿಸುತ್ತಿದ್ದ ಆತ, ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ನಟ ಶ್ರೀನಿವಾಸ ಮೂರ್ತಿಯವರ ಮಗ. ಹೆಸರು ಅಕ್ಷಯ್ ಕೃಷ್ಣನಾದರೆ ಮತ್ತೊಂದು ಹೆಸರು ನವೀನ್ ಕೃಷ್ಣ.
ನವೀನ್ ಕಾರಣಾಂತರಗಳಿಂದ ಈ ಧಾರಾವಾಹಿಯಿಂದ ಹೊರಗುಳಿದರು. ಕದಂಬ ಚಿತ್ರದಲ್ಲಿ ಡಾ| ವಿಷ್ಣು ಜೊತೆ ಅಭಿನಯಿಸಿ ಸೈ ಎನಿಸಿಕೊಂಡ ನವೀನ್, ನೆನಪಿರಲಿ, ಅಮೃತವಾಣಿ ಚಿತ್ರಗಳ ನಂತರ ಕಾಣಿಸಿಕೊಳ್ಳಲೇ ಇಲ್ಲ. ಇದರ ಕಾರಣಗಳನ್ನು ಕೆದಕದೆ ಫ್ರೆಶ್ ಸುದ್ದಿಗಾಗಿ ಪುಟ ಹರಡಿಕೊಳ್ಳುವವರಿಗೆ ಇದೆ ಇಲ್ಲೊಂದು ಬಿಸಿ ಬಿಸಿ ಸುದ್ದಿ.
ನವೀನ್ ಕೃಷ್ಣ ಮೈಕೊಡವಿಕೊಂಡು ಎದ್ದಿದ್ದಾರೆ. ಸುಮ್ಮನೇ ಅಲ್ಲ, ದೊಡ್ಡದೇ ಎನ್ನುವ ರೀತಿಯಲ್ಲಿ ಎದ್ದಿದ್ದಾರೆ. ಮುತುವರ್ಜಿಯಿಟ್ಟು ಕಥೆಯೊಂದನ್ನು ಹೊಸೆದು, ತಮ್ಮದೇ ಬ್ಯಾನರ್‌ನಲ್ಲಿ ಅದನ್ನು ಚಿತ್ರವಾಗಿಸುವ ಹೆಬ್ಬಯಕೆ ಈ ಪ್ರತಿಭಾವಂತನದು.
ಚಿತ್ರಕ್ಕಿಟ್ಟಿರುವ ಹೆಸರು ಧಿಮಾಕು. ಬಹುಮುಖ ಪ್ರತಿಭೆಯ ಈತ ಈ ಚಿತ್ರಕ್ಕೆಂದು ಎರಡು ಹಾಡುಗಳನ್ನು ಬರೆದಿರುವುದಲ್ಲದೇ ಒಂದಕ್ಕೆ ಧ್ವನಿ ನೀಡಿದ್ದಾರೆ. ರಮೇಶ್ ಭಟ್ ಹಾಗೂ ಜಗ್ಗೇಶ್‌ರಂಥ ಘಟಾನುಗಟಿಗಳು ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಲಿದ್ದಾರೆ. ನವೀನ್‌ಗೆ ಬೆಸ್ಟ್ ಆಫ್ ಲಕ್ ಎನ್ನೋಣವೇ?