ರಾಜಕುಮಾರಿ ಇನ್ನು ಹಾಡು ಹಾಡುವುದು ಬಾಕಿ
ಬೆಂಗಳೂರು, ಶುಕ್ರವಾರ, 18 ಜನವರಿ 2008( 15:23 IST )
ನಿರ್ಮಾಪಕ ಕೆ.ಮಂಜುವಿಗೆ ಕೊಬ್ರಿ ಮಂಜು ಅಂತಾನೂ ಹೆಸರಿದೆ. ಆದರೆ ಅವರ ಹೆಸರಿನ ಜೊತೆ ಸೇರಿರುವ ಗಂಡುಗಲಿ ಎಂಬ ವಿಶೇಷಣ ಅವರಿಗೆ ಚೆನ್ನಾಗಿ ಹೊಂದುತ್ತದೆ ಎಂಬುದು ಚಿತ್ರೋದ್ಯಮದವರ ಅಭಿಪ್ರಾಯ.
ಏಕೆಂದರೆ ಇವರ ಬಹು ನೀರೀಕ್ಷೆಯ ಸಾಹುಕಾರ ಮತ್ತು ಮಾತಾಡ್ ಮಾತಾಡು ಮಲ್ಲಿಗೆ ಚಿತ್ರಗಳು ಆರ್ಥಿಕವಾಗಿ ಸೋತಾಗ ಎಲ್ಲರೂ ಮಂಜು ಕಥೆ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ ದುಡ್ಡು ಕಳೆದ ಸ್ಥಳದಲ್ಲಿಯೇ ಹುಡುಕುವ ಛಾತಿಯ ಮಂಜು ಧೃತಿಗೆಟ್ಟಿಲ್ಲ ಎಂಬುದಕ್ಕೆ ಚಿತ್ರ ನಿರ್ಮಾಣದಲ್ಲಿ ಅವರು ಮತ್ತಷ್ಟು ಹೆಚ್ಚಿನ ಉತ್ಸಾಹದಿಂದ ತೊಡಗಿಸಿಕೊಂಡಿರುವುದೇ ಸಾಕ್ಷಿ.
ಲಕ್ಷ್ಮಿಶ್ರೀ ಕಂಬೈನ್ಸ್ನಲ್ಲಿ ವೆಂಕಟೇಶ್‌ರವರೊಂದಿಗೆ ಮಂಜು ನಿರ್ಮಿಸುತ್ತಿರುವ ರಾಜಕುಮಾರಿ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯವೂ ನೇರವೇರಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ಹಿಂದೆ ಅಹಂ ಪ್ರೇಮಾಸಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ರವಿಚಂದ್ರನ್-ಬಾಲಾಜಿ ಸೋದರರು ಈ ಚಿತ್ರದಲ್ಲಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷ. ಭೂಪತಿ ಚಿತ್ರದ ಯಶಸ್ಸನ್ನು ಬೆನ್ನಿಗಿಟ್ಟುಕೊಂಡಿರುವ ಎಸ್.ಗೋವಿಂದು (ಇವರು ಖ್ಯಾತ ಚಿತ್ರ ನಿರ್ದೇಶಕ ಎಸ್.ನಾರಾಯಣ್‌ರ ವರ ಸೋದರ ಎಂಬುದೂ ನಿಮಗೆ ಗೊತ್ತಿರಬಹುದು) ರಾಜಕುಮಾರಿಯ ನಿರ್ದೇಶಕರು. ಚಿತ್ರಕಥೆ-ಸಂಭಾಷಣೆಯೂ ಅವರದೇ.
ಕನ್ನಿಹಾ ಹಾಗೂ ನಿಖಿತಾ ನಾಯಕಿಯರಾಗಿದ್ದರೆ, ಪಲ್ಲಕ್ಕಿ ಚಿತ್ರದ ಖ್ಯಾತಿ ರಮಣೀತು ಚೌಧರಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು, ತುಳಸಿ ಶಿವಮಣಿ, ಬುಲೆಟ್ ಪ್ರಕಾಶ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಾಗೇಂದ್ರ ಪ್ರಸಾದ್ ಹಾಗೂ ಕಲ್ಯಾಣ್ ಸಾಹಿತ್ಯ ಮತ್ತು ಜೋಷಿಯವರ ಛಾಯಾಗ್ರಹಣ ಚಿತ್ರಕ್ಕಿದೆ.