ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಬೆಂಗಳೂರು, ಶುಕ್ರವಾರ, 18 ಜನವರಿ 2008( 17:40 IST )
ಎಲ್ಲಿಯ ಚಿತ್ರ ಎಲ್ಲಿಯ ಮೈಸೂರು ರಾಜವಂಶಸ್ತರು? ಎಂದು ಇನ್ನು ಮುಂದೆ ಅಚ್ಚರಿಗೊಳ್ಳುವ ಅಗತ್ಯವಿಲ್ಲ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಚಿತ್ರವನ್ನು ವೀಕ್ಷಿಸಿದ ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಚಿತ್ರವನ್ನು ಮೆಚ್ಚಿಕೊಂಡ ಸುದ್ದಿ ಗಾಂಧಿನಗರದ ಗಲ್ಲಿಯಿಂದ ಹೊರಬಿದ್ದಿದೆ.
ಪಕ್ಷದ ರಾಜಕಾರಣವನ್ನು ಹೊರತುಪಡಿಸಿದರೆ, ಫ್ಯಾಷನ್ ಜಗತ್ತು ಹಾಗೂ ಕ್ರಿಕೆಟ್ ಕ್ಷೇತ್ರದೊಂದಿಗೆ ಶ್ರೀಕಂಠದತ್ತರು ಗುರುತಿಸಿಕೊಂಡಿದ್ದರು. ಈಗ ಮತ್ತೊಂದು ಕ್ಷೇತ್ರ ಅವರ ಕಾರ್ಯವ್ಯಾಪ್ತಿಯಲ್ಲಿ ಸೇರಿದಂತಾಗಿದೆ. ಎ.ವಿಶ್ವನಾಥ್ ರೆಡ್ಡಿ ನಿರ್ಮಾಣದ ಈ ಚಿತ್ರ ಈಗಾಗಲೇ ಸೆನ್ಸಾರ್‌ನಿಂದ ಯು ಅರ್ಹತಾ ಪತ್ರವನ್ನು ಪಡೆದು ಬಿಡುಗಡೆಗೆ ಸಿದ್ಧವಾಗಿದೆ.
ಎಕ್ಸ್‌ಕೂಸ್ ಮಿ ಖ್ಯಾತಿಯ ಅಜಯ್ ಈ ಚಿತ್ರದ ನಾಯಕರು. ರಾಮಕೃಷ್ಣ, ವಿನಯಾ ಪ್ರಕಾಶ್, ದೀಪಾ, ಸುನೀತಾ, ನೀನಾಸಂ ಅಶ್ವತ್ಥ್ ಈ ಚಿತ್ರದ ಇತರ ಕಲಾವಿದರು. ಮಿಮಿಕ್ರಿ ದಯಾನಂದ್, ಎಂ.ಎಸ್.ಉಮೇಶ್, ಡಿಂಗ್ರಿ ನಾಗರಾಜ್ ಮೊದಲಾದ ಹಾಸ್ಯ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ಹಾಸ್ಯ ರಸದೂಟಕ್ಕೇನೂ ಕಮ್ಮಿಯಿಲ್ಲ ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ.