ಚಿತ್ರ ನಿರ್ದೇಶಕ ವೈ.ನಂಜುಡಪ್ಪ ನಿಧನ
ಬೆಂಗಳೂರು, ಶನಿವಾರ, 19 ಜನವರಿ 2008( 11:07 IST )
ಗೆಜ್ಜೆನಾದ, ನಾಗರಿಕ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ವೈ.ನಂಜುಡಪ್ಪ ನಿಧನರಾಗಿದ್ದಾರೆ. ಮೂತ್ರಪಿಂಡದ ವೈಫಲ್ಯದಿಂದ ನರಳುತ್ತಿದ್ದ ಅವರು ಇಂದು ಬೆಳಗ್ಗೆ 3.30ಕ್ಕೆ ನಿಧನರಾದರು ಎಂದು ಸುದ್ದಿ ಮೂಲಗಳು ತಿಳಿಸಿವೆ.
ವಿಜಯ್‌ಕುಮಾರ್‌ರೊಂದಿಗೆ ಇವರು ಜೋಡಿಯಾಗಿ ನಿರ್ದೇಶಿಸಿದ ಗೆಜ್ಜೆನಾದ ಚಿತ್ರ ಪ್ರೇಕ್ಷಕರ ಹಾಗೂ ಉದ್ಯಮದ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಮ್‌ಕುಮಾರ್-ಶ್ವೇತಾ ಜೋಡಿಯ ಈ ಚಿತ್ರ ರಾಮ್‌ಕುಮಾರ್ ಅವರಿಗೆ ಲೈಫ್ ಕೊಟ್ಟಿದ್ದೇ ಅಲ್ಲದೇ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ವಿ.ಮನೋಹರ್ ಅವರಿಗೂ ಜನಪ್ರಿಯತೆ ತಂದುಕೊಟ್ಟಿತ್ತು.
ಬಹಳ ದಿನಗಳ ನಂತರ ಪಂಢರೀಬಾಯಿ ಹಾಗೂ ಟಿ.ಎನ್.ಬಾಲಕೃಷ್ಣರವರನ್ನು ಜೋಡಿಯಾಗಿಸಿ ಕಥೆ ಹೆಣೆದದ್ದೇ ಅಲ್ಲದೇ ಅವರ ಮೇಲೊಂದು ಹಾಡನ್ನೂ ಚಿತ್ರೀಕರಿಸಿದ ಪರಿ ಚಿತ್ರ ರಸಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಸೋಮವಾರ ಸಂತೆಗೇ ಚುಂಚಾನಘಟ್ಟಕ್ಕೇ ಬಂದಿದ್ದ ಚೆಲುವಾ.. ಎಂಬ ಹಾಡು ಆರ್ಕೆಸ್ಟ್ರಾಗಳಲ್ಲಿ ಹಾಗೂ ಜಾತ್ರೆಗಳಲ್ಲಿ ಇಂದಿಗೂ ಪಡ್ಡೆ ಹುಡುಗರ ಹಾಡು.
ಇಷ್ಟೆಲ್ಲಾ ಪ್ರತಿಭೆಯಿದ್ದ, ರಾಜ್ಯಪ್ರಶಸ್ತಿಗೂ ಭಾಜನರಾಗಿದ್ದ ನಂಜುಡಪ್ಪನವರಿಗೆ ಚಿತ್ರರಂಗದಲ್ಲಿ ಮುಂದೆ ಅಂತಹ ಹೇಳಿಕೊಳ್ಳುವ ಅವಕಾಶಗಳು ಬರಲಿಲ್ಲ ಎಂಬುದು ವಿಷಾದನೀಯ. ನಂಜುಡಪ್ಪ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.