ಕಾದಂಬರಿಯಿಂದ ಪಕ್ಷಾಂತರ ಮಾಡಿದ ಕೂಡ್ಲು
ಬೆಂಗಳೂರು, ಶನಿವಾರ, 19 ಜನವರಿ 2008( 16:00 IST )
ಚಿತ್ರ ನಿರ್ದೇಶಕ ಕೂಡ್ಲು ರಾಮಕೃಷ್ಣರ ಬಗೆಗೆ ಚಿತ್ರರಂಗದ ಹಲವು ವಲಯದವರು ಹಲವು ರೀತಿಯಲ್ಲಿ ಅಭಿಪ್ರಾಯ ನೀಡುತ್ತಾರೆ. ಹಲವು ರೀತಿಯಲ್ಲಿ ನಡೆದುಕೊಳ್ಳುವ ಕೂಡ್ಲುರವರ ಪ್ರತಿಭೆಯೇ ಇದಕ್ಕೆ ಕಾರಣ ಎಂಬುದು ಕುಹಕವೂ ಹೌದು, ವಾಸ್ತವವೂ ಹೌದು!
ಅದೇನೇ ಇರಲಿ. ಕಾದಂಬರಿ ಆಧಾರಿತ ಸಾಂಸಾರಿಕ ಚಿತ್ರಗಳನ್ನಷ್ಟೇ ಮಾಡುತ್ತೇನೆ ಎಂದು ತಪಸ್ಸು ಮಾಡಿದ್ದ ಕೋಡ್ಲು ಸ್ವಲ್ಪ ಟ್ರಾಕ್ ಬದಲಿಸಿ ತಮಾಷೆಗಾಗಿ ಎಂಬ ಹಾಸ್ಯ ಪ್ರಧಾನ ಚಿತ್ರ ಮಾಡಿದರು. ಉದ್ಯಮದವರು ಹಾಗೂ ಪ್ರೇಕ್ಷಕರು ಈ ಚಿತ್ರವನ್ನು ತೀರಾ ತಮಾಷೆಯಾಗಿ ತೆಗೆದುಕೊಂಡಿದ್ದರಿಂದ ಚಿತ್ರ ಗಿಟ್ಟಲಿಲ್ಲ. ಈಗ ಮತ್ತೊಮ್ಮೆ ಟ್ರಾಕ್ ಬದಲಿಸಿ ಮಕ್ಕಳ ಚಿತ್ರದೆಡೆಗೆ ಹೊರಳಿದ್ದಾರೆ.
ಚಿಲಿಪಿಲಿ ಹಕ್ಕಿಗಳು ಎಂಬ ಮಕ್ಕಳ ಚಿತ್ರವನ್ನು ಕೋಡ್ಲು ನಿರ್ದೇಶಿಸಿದ್ದು ಅದಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಪ್ರಮಾಣಪತ್ರ ಲಭಿಸಿದೆ. ಚಿನ್ನಾರಿಮುತ್ತ ಚಿತ್ರದ ಕಥೆ ಹೆಣೆಯುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿಯವರು ಈ ಬಾರಿ ಕೋಡ್ಲು ಜತೆಗಿರುವುದು ವಿಶೇಷ. ಈ ಇಬ್ಬರ ಜೊತೆ ಪತ್ರಕರ್ತ ಜೆ.ಎಂ.ಪ್ರಹ್ಲಾದ್ ಸೇರಿ ಚಿತ್ರಕಥೆ ರಚಿಸಿದ್ದಾರಂತೆ. ಮಾಸ್ಟರ್ ಕಿಶನ್ ಸೇರಿದಂತೆ 300 ಬಾಲ ಕಲಾವಿದರು ಈ ಚಿತ್ರದಲ್ಲಿರುವುದು ಮತ್ತೊಂದು ವಿಶೇಷ ಎನ್ನುತ್ತದೆ ಚಿತ್ರತಂಡ.