ಕೋಡಗನ ಕೋಳಿ ನುಂಗಿತ್ತಾ ಧ್ವನಿಸುರುಳಿ ಬಿಡುಗಡೆ
ಇನ್ನೇನು ಸದ್ಯದಲ್ಲಿಯೇ ಚುನಾವಣೆಗಳು ಘೋಷಣೆಯಾಗಲಿವೆ. ತುರುವೇಕೆರೆ ಕ್ಷೇತ್ರದಿಂದ ಸ್ಪರ್ಧಿಸಲಿರುವ ಜಗ್ಗೇಶ್ ಇನ್ನು ಮುಂದೆ ಸಿಗುವುದು ಕಷ್ಟವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಲಿರುವ ಹಿನ್ನೆಲೆಯಲ್ಲೇ ಜಗ್ಗೇಶ್ ಅಭಿನಯದ ಕೋಡಗನ ಕೋಳಿ ನುಂಗಿತ್ತಾ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ.
ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ರಾಜಕೀಯ ನನ್ನ ಪ್ರವೃತ್ತಿ, ಅಭಿನಯವಷ್ಟೇ ನನ್ನ ವೃತ್ತಿ. ಇದರಲ್ಲೇ ಉಳಿಯಬೇಕೆಂದು ನನ್ನ ಆಸೆ ಎಂದು ಊಹಾಪೋಹಗಳಿಗೆ ಸ್ಪಷ್ಟೀಕರಣ ನೀಡಿದರು.
ಕುಟುಂಬ ಸಹಿತರಾಗಿ ಬಂದ ನಾಯಕಿ ಪೂಜಾ ಗಾಂಧಿ, ಇದು ಮುಂಗಾರು ಮಳೆ ಚಿತ್ರದ ನಂತರ ಸಹಿ ಹಾಕಿದ ಚಿತ್ರವಾದರೂ ಕಾರಣಾಂತರಗಳಿಂದ ತಡವಾಗಿ ಹೊರಬರುತ್ತಿದೆ. ಆದರೂ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ಮಾಜಿ ಸಚಿವ ಜಮೀರ್ ಅಹಮದ್, ಮಾಜಿ ಶಾಸಕ ಬಾಲಕೃಷ್ಣ ಹಾಗೂ ನಿರ್ದೇಶಕ ವಾಸು ಸಮಾರಂಭದಲ್ಲಿ ಹಾಜರಿದ್ದರು.