ಹೊಸ ರೂಪದೊಂದಿಗೆ ಲಗ್ಗೆ ಹಾಕಲಿರುವ ಹಾಸ್ಯ ಲಾಸ್ಯ
ಬೆಂಗಳೂರು, ಸೋಮವಾರ, 21 ಜನವರಿ 2008( 13:19 IST )
ಈಗ್ಗೆ 5 ವರ್ಷಗಳ ಕೆಳಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯ ಲಾಸ್ಯ ಧಾರಾವಾಹಿಯನ್ನು ನೋಡಲು ಜನರು ಮುಗೀಬೀಳುತ್ತಿದ್ದರು. 600 ಕಂತುಗಳವರೆಗೆ ಈ ಧಾರಾವಾಹಿ ಪ್ರಸಾರಗೊಂಡಿದ್ದೇ ಇದರ ಜನಪ್ರಿಯತೆಗೆ ಸಾಕ್ಷಿ.
ಕಾರಣಾಂತರಗಳಿಂದ ನಿಂತುಹೋಗಿದ್ದ ಈ ಧಾರಾವಾಹಿ ಪುನರಾರಂಭಗೊಳ್ಳಲಿದೆ. ಇದರ ಪಾತ್ರಧಾರಿಗಳಾಗಿದ್ದ ಮುತ್ತುರಾಜ್ ಮತ್ತು ಶ್ರೀಕಂಠರವರ ಜೊತೆಗೆ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವವರು ವೀರಣ್ಣಗೌಡರು. ಈ ಧಾರಾವಾಹಿಗೆ ಅವರದೇ ಬಂಡವಾಳ-ಸಂಭಾಷಣೆ-ನಿರ್ದೇಶನ.
ಹಳ್ಳಿಗಳಲ್ಲಿನ ರಾಜಕಾರಣಿಗಳ ಗೋಸುಂಬೆತನ, ಜೋಭದ್ರಗೇಡಿಗಳ ಪೀಕಲಾಟಗಳನ್ನು ವಸ್ತುವಾಗಿ ಹೊಂದಿರುವ ಈ ಧಾರಾವಾಹಿಯಲ್ಲಿ ಶ್ರೀಕಂಠ ಮತ್ತು ಮುತ್ತುರಾಜ್ ಕ್ರಮವಾಗಿ ಗುಂಡ ಮತ್ತು ಯಜಮಾನನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಮೆಸೇಜ್ ಇಲ್ಲ. ಜನರನ್ನು ನಗಿಸುವುದಷ್ಟೇ ಉದ್ದೇಶ ಎಂಬ ಅಭಿಪ್ರಾಯ ನಿರ್ದೇಶಕರದು. ಹಾಗಿದ್ದ ಮೇಲೆ ನಗಲು ಸಿದ್ಧರಾಗಿರಲ್ಲ?!