ಕಲ್ಪನೆಗೆ ತಕ್ಕಂತೆ ಗಂಗಾ ಕಾವೇರಿ
ಬೆಂಗಳೂರು, ಸೋಮವಾರ, 21 ಜನವರಿ 2008( 13:20 IST )
ಸೆಟ್ಟೇರಿದ ದಿನದಿಂದಲೂ ಒಂದಲ್ಲಾ ಒಂದು ಸುದ್ದಿಗೆ ಕಾರಣವಾಗಿರುವುದು ಗಂಗಾ ಕಾವೇರಿ ಚಿತ್ರ. ಹಿಮಾಲಯದ ತಪ್ಪಲಿನಲ್ಲಿ ಚಿತ್ರೀಕರಿಸಿದ ಸಾಹಸವನ್ನಾಗಲೀ, ಪತ್ರಕರ್ತ ಮಿತ್ರರಿಗೆ ಪಾತ್ರ ನೀಡಿದ್ದನ್ನಾಗಲೀ ಅತ್ಯಂತ ಸಂಭ್ರಮದಿಂದ ಹೇಳಿಕೊಳ್ಳುವ ನಿರ್ದೇಶಕ ವಿಷ್ಣುಕಾಂತ್ ಈಗ ಚೈತನ್ಯದ ಚಿಲುಮೆಯಾಗಿಬಿಟ್ಟಿದ್ದಾರೆ.
ಚಿತ್ರ ತಮ್ಮ ಕಲ್ಪನೆಯಂತೆಯೇ ಮೂಡಿ ಬರುತ್ತಿರುವುದಕ್ಕೆ, ಹೊಸ ಹುಡುಗ ಅಕ್ಷಯ್ ಚೆನ್ನಾಗಿ ನಟಿಸಿರುವುದಕ್ಕೆ ಖುಷಿ ಖುಷಿಯಾಗಿರುವ ವಿಷ್ಣುಕಾಂತ್ ಬಾಕಿ ಉಳಿದಿರುವ ಗೀತೆಯೊಂದರ ಚಿತ್ರೀಕರಣಕ್ಕಾಗಿ ಮತ್ತೆ ಹಿಮಾಲಯದ ತಪ್ಪಲಿಗೆ ತೆರಳಲಿದ್ದಾರೆ.
ವಿಷ್ಣುವರ್ಧನ್-ಸುಮಲತಾ ಅಭಿನಯದ ಕರ್ಣ ಚಿತ್ರದಲ್ಲಿ ಕೊನೆಯ ಬಾರಿಗೆ ಅಭಿನಯಿಸಿದ್ದ ಖ್ಯಾತ ಕಲಾವಿದೆ ರೂಪಾದೇವಿ ಈ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಲಗ್ಗೆಯಿಡುತ್ತಿದ್ದಾರೆ. ವಿಷ್ಣುಕಾಂತ್ ಕಥೆ ಹೇಳಿದ ರೀತಿ ಹಾಗೂ ಪಾತ್ರವರ್ಗದಲ್ಲಿ ಅನಂತ್‌ನಾಗ್ ಇರುವುದು ಚಿತ್ರವನ್ನು ಒಪ್ಪಿಕೊಳ್ಳುವಂತೆ ಅವರನ್ನು ಪ್ರೇರೇಪಿಸಿತಂತೆ.
ಹಲವು ವಿಶೇಷಗಳ ಗಂಗಾ ಕಾವೇರಿಗೆ ಯಶಸ್ಸು ಕೋರೋಣವೇ?