ಗಿರಿಕನ್ಯೆಗೆ ಡಾಕ್ಟರೇಟ್!
ಬೆಂಗಳೂರು, ಮಂಗಳವಾರ, 22 ಜನವರಿ 2008( 13:41 IST )
ಜಯಮಾಲ ಹಲವಾರು ಚಿತ್ರಗಳಲ್ಲಿ ನಟಿಸಿರಬಹುದು. ಆದರೆ ಜಯಮಾಲ ಎಂದಾಕ್ಷಣ ನೆನಪಾಗುವುದು ಅವರು ನಟಿಸಿದ ಗಿರಿಕನ್ಯೆ ಚಿತ್ರವೇ ಎಂಬುದು ಸತ್ಯ. ಈ ಚಿತ್ರದಲ್ಲಿ ಅವರೊಂದಿಗೆ ಡಾ|ರಾಜ್ ನಟಿಸಿದ್ದು, ಚಿತ್ರದ ಹಾಡುಗಲೆಲ್ಲಾ ಸೂಪರ್ ಹಿಟ್ ಆಗಿರುವುದೂ ಇದಕ್ಕೆ ಕಾರಣ.
ಕರ್ನಾಟಕ ರಾಜ್ಯದ ನಿರ್ವಸಿತ ಮಹಿಳೆಯರ ಪುನರ್ ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ ಎಂಬ ವಿಷಯದ ಕುರಿತು ಸುಮಾರು ದಿನಗಳ ಹಿಂದೆಯೇ ಜಯಮಾಲಾ ಪ್ರಬಂಧ ಮಂಡಿಸಿ ಡಾ|ಜಯಮಾಲಾ ಎನಿಸಿಕೊಂಡಿದ್ದರು. ಅದರೆ ಪದವಿ ಪ್ರದಾನ ನಡೆದಿರಲಿಲ್ಲ. ಈಗ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಿಂದಲೇ ಜಯಮಾಲಾ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಾರೆ.
ಇಲ್ಲಿಯ ತನಕ ರಾಜ್‌ಕುಮಾರ್, ವಿಷ್ಣುವರ್ಧನ್ ಹಾಗೂ ಬಿ.ಸರೋಜಾದೇವಿಯವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಅಧ್ಯಯನ ನಡೆಸಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಕೀರ್ತಿ ಜಯಮಾಲಾರದ್ದು. ಗಿರಿಕನ್ಯೆಯಾಗಿ ಬಂದು ತಾಯಿಸಾಹೇಬರಾಗಿ ಪ್ರತಿಭೆ ಮೆರೆದ ಜಯಮಾಲಾ ಕೀರೀಟಕ್ಕೆ ಇದು ಮತ್ತೊಂದು ಗರಿ. ಚಿತ್ರರಸಿಕರು ಜಯಮಾಲಾರಿಗೆ ಕಂಗ್ರಾಟ್ಸ್ ಹೇಳಲು ಇದು ಸಕಾಲವಲ್ಲವೇ?