ಕುಂಕುಮಭಾಗ್ಯದ ವಾಸುವಿನಿಂದ ಸೌಂದರ್ಯ ಲಹರಿ
ಬೆಂಗಳೂರು, ಮಂಗಳವಾರ, 22 ಜನವರಿ 2008( 13:43 IST )
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕುಂಕುಮಭಾಗ್ಯ ಧಾರಾವಾಹಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸುರವರನ್ನು ತಮಾಷೆಗೆ ಮೆಗಾಪಟ್ಟಣ ವಾಸು ಎಂದು ಕೆಲವರು ಕರೆಯುವುದುಂಟು. ಅವರ ಈ ಮೆಗಾ ಧಾರಾವಾಹಿ ಸಾವಿರ ಕಂತಿನವರೆಗೆ ಪ್ರಸಾರವಾಗಿದ್ದೇ ಇದಕ್ಕೆ ಕಾರಣ.
ವಾಸು ಈಗ ಕಸ್ತೂರಿ ಚಾನೆಲ್‌ಗಾಗಿ ಸೌಂದರ್ಯ ಲಹರಿ ಎಂಬ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದು ಪ್ರತಿ ದಿನ ರಾತ್ರಿ 10 ಗಂಟೆಗೆ ಅದು ಪ್ರಸಾರವಾಗುತ್ತಿದೆ.
ಜೀವನದಲ್ಲಿ ಸೋಲುಂಟಾದ ತಕ್ಷಣವೇ ಹತಾಶರಾಗಿ ಆತ್ಮಹತ್ಯೆಗೆ ಮೊರೆಹೋಗುವ ಯುವಕರಿಗೆ ಜೀವನದ ಮೌಲ್ಯವನ್ನು ಅರ್ಥಮಾಡಿಸುವ ಪ್ರಯತ್ನವನ್ನು ಈ ಧಾರಾವಾಹಿಯಲ್ಲಿ ಮಾಡಲಾಗಿದೆ ಎಂಬುದು ಧಾರಾವಾಹಿಯ ತಂಡ ನೀಡಿರುವ ಮಾಹಿತಿ.
ಮಾಸ್ಟರ್ ಹಿರಣ್ಣಯ್ಯ, ಕೆ.ಎಸ್.ಎಲ್.ಸ್ವಾಮಿ, ಕೃಷ್ಣೇಗೌಡರಂತಹ ಹಿರಿಯರು, ನಿತಿನ್, ನಿಶ್ಚಿತ್ ಗೌಡ ಹಾಗೂ ನಮ್ರತಾರಂತಹ ಹೊಸ ಕಲಾವಿದರ ಅಪೂರ್ವ ಸಂಗಮ ಈ ಧಾರಾವಾಹಿಯಲ್ಲಿದೆಯಂತೆ. ಬೆಸ್ಟ್ ಆಫ್ ಲಕ್ ಎನ್ನೋಣವೇ?