ಪ್ರೀತಿ ಏಕೆ.. ಯಶಸ್ವೀ ಚಿತ್ರ ಅನ್ನೋ ಮಾತು ನಿಜ್ವಾ?
ಬೆಂಗಳೂರು, ಬುಧವಾರ, 23 ಜನವರಿ 2008( 12:35 IST )
ನೀವು ಏನೇ ಹೇಳ್ರಣ್ಣಾ ಈ ಸಿನಿಮಾದೋರು ಭಾರೀ ಸುಳ್ಳು ಹೇಳ್ತಾರಪ್ಪಾ. ಅಲ್ಲಾ,.. ಚಿತ್ರ ಚೆನ್ನಾಗಿ ಓಡ್ಲೀ ಅಂದ್ಬುಟ್ಟು ಒಂದೆರ್ಡು ಸಣ್ಣ ಪುಟ್ಟ ಸುಳ್ಳು ಹೇಳಿ ಕೀವೀಲಿ ಹೂ ಇಡೋದು ವಾಡಿಕೆ. ಕೆಲವರು ಚೆಂಡು ಹೂ ಇಡ್ತಾರೆ, ತಡ್ಕೋಬಹುದು. ಇನ್ನೂ ಕೆಲವರು ತಾವರೆ ಹೂವು ಮಡಗ್ತಾರೆ, ಅದನ್ನೂ ಸಹಿಸ್ಕೋಬಹುದು. ಮತ್ತೂ ಕೆಲವರು ಸಾಕ್ಷಾತ್ ಹೂಕೋಸನ್ನೇ ಕೀವೀಲಿ ಇಡ್ತಾರೆ ಅನ್ಕಳಿ, ಹಾಳಾಗಿ ಹೋಗ್ಲಿ ಅಂತ ಅದನ್ನೂ ಇಡಸ್ಕತೀವಿ. ಅದೇ, ಕೀವೀಲಿ ಲಾಲ್ಬಾಗನ್ನೇ ಇಡಕ್ಕೆ ಬಂದ್ರೆ ಹೆಂಗೆ ಎಂಬುದು ಚಿತ್ರ ರಸಿಕರ ಹಾಸ್ಯಪೂರ್ವಕ ಜಿಜ್ಞಾಸೆ.
ಅದೇನಾತಪಾ ಅಂದ್ರೇ, ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರಕ್ಕೆ ನಮ್ ಮಂಡ್ಯದ ಹುಡ್ಗ ಪ್ರೇಮ್‌ನ್ನ ಬರೀ ನಿದೇಶಕ ಅಂತ ಹಾಕ್ಕಂಡಿದ್ರೆ ಚೆನ್ನಾಗಿತ್ತು. ಅವ್ನೇ ಹೀರೋ ಅಂದಿದಿಕ್ಕೆ ಗಾಂಧಿನಗರದ ಜನ ನಗರಬಾರದ ಜಾಗದಿಂದ ನಕ್ರಂತೆ. ಹೋಗ್ಲಿ ತಗಾ ಅತ್ಲಾಗೆ, ಇದುನ್ನೂ ನೋಡೇಬಿಡಾಮ ಅನ್ಕಂಡ್ರು ಈ ಮಂದಿ. ದಿನಕ್ಕೊಂದು ಥರಾ ರಂಗ್ಬಿರಂಗಿ ಸುದ್ದೀ ಬರೋಕೆ ಶುರುವಾಯ್ತು ನೋಡಿ. ಎಲ್ಲ ಹುಷಾರಾದ್ರು.
ಎಷ್ಟು ದಿನಾ ಆದ್ರೂ ಚಿತ್ರ ಮುಗಿಯೋ ಲಕ್ಷಣಾನೇ ಕಾಣಿಸ್ಲಿಲ್ಲ. ಮಲ್ಲಿಕಾ ಶೆರಾವತ್ ಕರ್ಕೊಂಡು ಬಂದು ಏನೇನು ಗಿಮಿಕ್ ಮಾಡಿದ್ರೂ ಗಿಟ್ಟೋಹಂಗೆ ಕಾಣಿಸ್ಲಿಲ್ಲ. ಬಿಡುಗಡೆಗೆ ಮುಂಚೆ ಒಂದಿಷ್ಟು ಗಲಾಟೆ ಆದ್ವು, ವಿವಾದ ಆಯ್ತು. ಇಷ್ಟಾಗಿದ್ದಿಕ್ಕಾದ್ರೂ ಜನ ಬರ್ಬೇಕು ಅಲ್ವಾ. ಆದ್ರೆ ಬರ್ಲಿಲ್ಲ. ಕೊನೆಗೆ ಈ ಚಿತ್ರಾನ ಜೀ ಟೀವಿಯೋರು 1 ಕೋಟಿ 8 ಲಕ್ಷಕ್ಕೆ ತಗಂಡ್ರು ಅಂತ ಸುಳ್ಳು ಹೇಳಾದೇ? ಇದನ್ನ ನೋಡಿ ಅವ್ರು ಸುಮ್ನಿರ್ಬೇಕಲ್ಲ? ಇಲ್ಲ ಕಣ್ರಪಾ ನಾವು ಕೊಟ್ಟಿರೋ ದುಡ್ಡು ಅದರ ಹತ್ರಕ್ಕೂ ಬರಲ್ಲ ಅಂದ್ಬಿಟ್ರು ಜೀ ಟೀವಿಯೋರು. ಆಯ್ತಲ್ಲಾ ಮುಖಕ್ಕೆ ಮಂಗಳಾರತಿ.
ಈಗ ನೋಡಿದ್ರೆ ಥೇಟರ್ ಖಾಲಿ ಹೊಡೀತಾ ಇದ್ಯಂತೆ. ಒಟ್ಟು 99 ಪ್ರಿಂಟ್ ಹಾಕ್ಸಿ ರೀಲೀಸ್ ಮಾಡಿದ್ರೆ ಅದೀಗ 25 ಥೇಟರ್ಗೆ ಬಂದು ನಿಂತಿದ್ಯಂತೆ. ಲಾಭದ ಮಾತು ಹಾಗಿರ್ಲಿ, ಅಸಲು ಗಿಟ್ಟೋದೇ ಕಷ್ಟ ಅಂತಿದಾರೆ ಉದ್ಯಮದ ಜನ. ಯಾಕಪ್ಪಾ ಬೇಕಾಗಿತ್ತೂ ಇಷ್ಟೊಂದು ಗಿಮಿಕ್ಕೂ? ನೀವೇನೇ ಹೇಳ್ರೀ ... ಸುಳ್ಳೇ ಸುಳ್ಳೂ ಈ ಭೂಮಿ ಮ್ಯಾಲೇ ಎಲ್ಲಾ ಸುಳ್ಳೂ ಅನ್ನೋ ಮಾತು ನಿಜಾ ಕಣ್ರೀ..!!