ಹಾಡುತ್ತಾ ಸಾಗುತ್ತಿರುವ ಆಟೋ ಕೆಎ 99-ಬಿ 33
ಬೆಂಗಳೂರು, ಗುರುವಾರ, 24 ಜನವರಿ 2008( 12:24 IST )
ಆಕರ್ಷಣೀಯ ಟೈಟಲ್‌ಗಳನ್ನಿರಿಸುವ ಮೂಲಕ ಪ್ರೇಕ್ಷಕರನ್ನು ಬುಟ್ಟಿಗೆ ಹಾಕಿಕೊಳ್ಳುವ ತಂತ್ರದ ಚಿತ್ರಗಳ ಕುರಿತು ಈ ಅಂಕಣದಲ್ಲಿ ಹಿಂದೊಮ್ಮೆ ಪ್ರಸ್ತಾಪಿಸಲಾಗಿತ್ತು. ಅಂಥದೇ ಶೀರ್ಷಿಕೆಯಿರುವ ಕೆಎ 99-ಬಿ 333 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಚಿತ್ರದ ಟೈಟಲ್ ಆಟೋಗೆ ಸಂಬಂಧಪಟ್ಟಿದ್ದರೂ ಇದು ಆಟೋರಾಜ ಚಿತ್ರದಂಥ ಕಥೆ ಹೊಂದಿದೆಯೋ ಅಥವಾ ಆಟೋ ಶಂಕರ್ ಚಿತ್ರದಂಥ ತಿರುಳನ್ನು ಹೊಂದಿದೆಯೋ ಎಂಬುದನ್ನು ಅರಿಯಲು ಚಿತ್ರ ಬಿಡುಗಡೆಯಾಗುವವರೆಗೆ ನೀವು ಕಾಯಬೇಕು.
ರಮಣೀಯ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಜೋಗ, ಹೊನ್ನಾವರ ಮತ್ತು ಸಾಗರದ ಸುತ್ತಮುತ್ತ ಚಿತ್ರದ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಮುಂಗಾರು ಮಳೆ ಚಿತ್ರದಲ್ಲಿ ಜೋಗ್ ಸುತ್ತಮುತ್ತಲ ಪ್ರದೇಶಗಳು ಪ್ರೇಕ್ಷಕರಿಗೆ ಹುಚ್ಚು ಹಿಡಿಸಿರುವುದರಿಂದ ಈಗ ಎಲ್ಲರ ಕಣ್ಣೂ ಜೋಗದ ಮ್ಯಾಲೆ!
ಕುಹೂ ಕುಹೂ ಹಾಡಲೆ ಗಾನ ಕೋಗಿಲೆ ಮತ್ತು ನಗುತಿದ್ದರೆ ಹುಡುಗಿ ನೀ ಮುತ್ತುಗಳ ಕಳಿಸೆ ಎಂಬೆರಡು ಹಾಡುಗಳನ್ನು ನಾಯಕ ಸುನೀಲ್ ಮತ್ತು ನಾಯಕಿ ದೀಪಾಚಾರಿಯವರ ಅಭಿನಯದಲ್ಲಿ ಚಿತ್ರೀಕರಿಸಲಾಯಿತು ಎಂದು ಚಿತ್ರತಂಡ ತಿಳಿಸಿದ್ದು ಗೀತೆಗಳು ಹೇಗೆ ಮೂಡಿಬಂದಿರಬಹುದು ಎಂದು ಕುತೂಹಲದಿಂದ ಕಾಯುವಂತಾಗಿದೆ.