ರಾಜಕೀಯ ಕಲಿಗಳಿಂದ ಕ್ಲಾಪ್ ಮಾಡಿಸಿಕೊಂಡ ನನ್ನುಸಿರೇ
ಬೆಂಗಳೂರು, ಶುಕ್ರವಾರ, 25 ಜನವರಿ 2008( 11:42 IST )
ಸದ್ಯದಲ್ಲಿಯೇ ಚುನಾವಣೆಗಳು ಬರಲಿರುವ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಯಾವುದೇ ನಾಯಕನೂ ಈಗ ಬಿಡುವಿರದ ನಾಯಕನೇ. ಇಂಥಾದ್ದರಲ್ಲಿ ಕಾಂಗ್ರೆಸ್ ಬಾಗಿಲಲ್ಲಿ ನಿಂತಿರುವ ಎಂ.ಪಿ.ಪ್ರಕಾಶ್ ಹಾಗೂ ಕಾಂಗ್ರೆಸ್‌ನಲ್ಲಿ ಭದ್ರವಾಗಿರುವ ದಿನೇಶ್ ಗುಂಡೂರಾವ್ ಚಿತ್ರವೊಂದರ ಮುಹೂರ್ತದಲ್ಲಿ ಪಾಲ್ಗೊಂಡಿದ್ದು ಎಲ್ಲರ ಹುಬ್ಬೇರಿಸಿತ್ತು.
ಅಶೋಕ್ ನಿರ್ಮಾಣದ ನನ್ನುಸಿರೇ ಚಿತ್ರದ ಮುಹೂರ್ತ ಪ್ರಸಾದ್ ರೆಕಾರ್ಡಿಂಗ್ ಸ್ಡುಡಿಯೋದಲ್ಲಿ ನಡೆದಾಗ ಆರಂಭದ ದೃಶ್ಯಕ್ಕೆ ಎಂ.ಪಿ.ಪ್ರಕಾಶ್ ಕ್ಲಾಪ್ ಮಾಡಿದರೆ, ದಿನೇಶ್ ಗುಂಡೂರಾವ್ ಕ್ಯಾಮೆರಾ ಚಾಲನೆ ಮಾಡಿದರು. ಎರಡು ತಲೆಮಾರನ್ನು ಪ್ರತಿನಿಧಿಸುವ ಈ ರಾಜಕಾರಣಿಗಳು ಒಂದೆಡೆ ಸೇರಿದ್ದೇ ಚಿತ್ರದ ಮುಹೂರ್ತಕ್ಕೆ ಕಳೆ ತಂದುಕೊಟ್ಟಿತ್ತು.
ಈಗ ಮೈಸೂರಿನಲ್ಲಿ ಚಿತ್ರೀಕರಣ ನಡೆಸಿರುವ ನನ್ನುಸಿರೇ ತಂಡದ ನೌಕೆಗೆ ಸುರಗಿಮಠ ಸಂತೋಷ್ ಹಾಗೂ ವೇಲು ಪ್ರಿಯನ್ ಎಂಬ ಜೋಡಿ ಕ್ಯಾಪ್ಟನ್‌ಗಳಿರುವುದು ವಿಶೇಷ. ಅಂದರೆ ಇವರೇ ಚಿತ್ರದ ನಿರ್ದೇಶಕರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲವಷ್ಟೇ? ಯು2 ವಾಹಿನಿಯ ನಿರೂಪಕ ರಾಹುಲ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮನೀಷ್, ಆಲಿಶಾ, ಕೀರ್ತಿ ಮೊದಲಾದವರು ತಾರಾಗಣದಲ್ಲಿರುವ ಇತರರು. ನಿರ್ದೇಶಕ ಜೋಡಿಯಾದ ದೊರೆ-ಭಗವಾನ್ ಪರಂಪರೆಯನ್ನು ಸದರಿ ಚಿತ್ರದ ನಿರ್ದೇಶಕರು ಮುಂದುವರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.