ಹಾಡಿನ ಸಾಲೇ ಚಿತ್ರದ ಹೆಸರು
ಬೆಂಗಳೂರು, ಶುಕ್ರವಾರ, 25 ಜನವರಿ 2008( 12:46 IST )
ಒಂದು ಚಿತ್ರ ಯಶಸ್ವಿಯಾಯಿತೆಂದರೆ ಅದರ ನಟರು, ತಂತ್ರಜ್ಞರು ಹಾಗೂ ಹಾಡುಗಳಿಗೆ ಇನ್ನಿಲ್ಲದ ಬೇಡಿಕೆ ಬಂದುಬಿಡುತ್ತದೆ ಎನ್ನುವುದಕ್ಕೆ ಪುನೀತ್ ಅಭಿನಯದ ಮಿಲನ ಚಿತ್ರವೇ ಸಾಕ್ಷಿ. ಈ ಚಿತ್ರದ ಅಂತೂ ಇಂತೂ ಪ್ರೀತಿ ಬಂತೂ ಎಂಬುದು ಸೂಪರ್‌ಹಿಟ್ ಗೀತೆ. ಅದೇ ಈಗ ಒಂದು ಚಿತ್ರದ ಶೀರ್ಷಿಕೆಯಾಗಿರುವುದು ಈ ಸ್ಯಾಂಡಲ್‌ವುಡ್ ಗಮ್ಮತ್ತು ಎನ್ನಬಹುದು.
ಆದಿತ್ಯಬಾಬು ಮತ್ತು ರಮ್ಯ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ಗೀತೆಯೊಂದನ್ನು ಬೆಂಗಳೂರಿನ ಇಸ್ಕಾನ್ ದೇವಾಲಯ, ಅರಮನೆಯ ಸುತ್ತಮುತ್ತ ಚಿತ್ರೀಕರಿಸಲಾಯ್ತು. ಸದರಿ ಗೀತೆಯಲ್ಲಿ 150 ಮಂದಿ ನೃತ್ಯಗಾರರು ಹೆಜ್ಜೆ ಹಾಕಿದ್ದು ಮತ್ತೊಂದು ವಿಶೇಷತೆ. ಹೊರಾಂಗಣ ಚಿತ್ರೀಕರಣದಲ್ಲಿ ಪಂಟರ್ ಆಗಿರುವ ಕ್ಯಾಮರಾಮನ್ ವೇಣು ಈ ಹಾಡನ್ನು ಚಿತ್ರೀಕರಿಸಿದ್ದು ನೀರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಚಿತ್ರಕ್ಕೆ ಎಂ.ಎಸ್.ರಮೇಶ್ - ರಾಜಶೇಖರ್ ಸಂಭಾಷಣೆ ಒದಗಿಸಿದ್ದರೆ, ಗುರುಕಿರಣ್ ಸಂಗೀತವಿದೆ. ಸಂಕಲನದ ಹೊಣೆ ಹೊತ್ತವರು ದೀಪು ಎಸ್.ಕುಮಾರ್. ವೀರ್ ಶಂಕರ್ ಚಿತ್ರದ ನಿರ್ದೇಶಕ.