ಬಂಧು ಬಳಗ ಸುದ್ದಿಯೇ ಗಾಂಧಿನಗರದ ಒಳ ಹೊರಗ
ಬೆಂಗಳೂರು, ಶನಿವಾರ, 26 ಜನವರಿ 2008( 16:57 IST )
ನಾಗಣ್ಣ ನಿರ್ದೇಶನದ ಚಿತ್ರವೆಂದರೆ ಅಲ್ಲೊಂದು ಕುತೂಹಲ, ನೀರೀಕ್ಷೆ ಇರುತ್ತದೆ. ಇವರು ನಿರ್ದೇಶಿಸಿದ ಸಾಮ್ರಾಟ್, ವಿಷ್ಣುಸೇನೆ ಮೊದಲಾದ ಚಿತ್ರಗಳು ಈ ಮಾತಿಗೆ ಪುಷ್ಟಿ ನೀಡುತ್ತವೆ. ಬಂದ ಚಿತ್ರವನ್ನೆಲ್ಲಾ ಒಪ್ಪಿಕೊಳ್ಳದೇ ತಮ್ಮತನ ತೋರಿಸಲು ಅವಕಾಶವಿರುವ ಚಿತ್ರವನ್ನಷ್ಟೇ ಒಪ್ಪಿಕೊಳ್ಳುವುದು ನಾಗಣ್ಣನವರ ವೈಶಿಷ್ಟ್ಯ.
ನಾಗಣ್ಣ ನಿರ್ದೇಶನದ ಬಂಧು ಬಳಗ ಚಿತ್ರಕ್ಕೆ ಮಾತುಗಳ ಧ್ವನಿಮುದ್ರಣ ಕಾರ್ಯ ಆಕಾಶ್ ಆಡಿಯೋದಲ್ಲಿ ನಡೆದಿದೆ. ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿಯಿದೆಯಂತೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಈ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆಂಬ ವಿಷಯ ಈಗ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಪ್ರಚಾರ ಪಡೆದಿರುವ ಸುದ್ದಿಯಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅಣ್ಣ ತಂಗಿ, ತವರಿನ ಸಿರಿ ಇವೇ ಮೊದಲಾದ ಚಿತ್ರಗಳಲ್ಲಿ ತಮ್ಮ ಭಾವಾಭಿನಯದ ಸಾಮರ್ಥ್ಯವನ್ನು ಶಿವಣ್ಣ ಈಗಾಗಲೇ ಸಾಬೀತು ಮಾಡಿದ್ದಾರೆ. ಈಗ ಬರುತ್ತಿರುವ ಸುದ್ದಿಯನ್ನು ನೋಡಿದರೆ, ಆ ಚಿತ್ರಗಳ ಸಾಲಿಗೆ ಬಂಧು ಬಳಗ ಚಿತ್ರವೂ ಸೇರಲಿದೆ ಎನಿಸುತ್ತದೆ.
ತೆಲುಗಿನ ಜನಾರ್ಧನ ಮಹರ್ಷಿ ಈ ಚಿತ್ರದ ಕಥೆ-ಚಿತ್ರಕಥೆ ರಚಿಸಿದ್ದು, ಹಂಸಲೇಖ ಸಂಗೀತ ನೀಡಿದ್ದಾರೆ. ಪೂನಂ ಕೌರ್, ದೊಡ್ಡಣ್ಣ, ಶಶಿಕುಮಾರ್, ಹೇಮಾಚೌಧರಿ ಮೊದಲಾದವರು ತಾರಾಗಣದಲ್ಲಿರುವ ಇತರರು.