ಇಪ್ಪತ್ತೊಂದು ದಿನಗಳ ಪಯಣದ ಒಂದು ಭಾಗ ಅಂತ್ಯ
ಬೆಂಗಳೂರು, ಮಂಗಳವಾರ, 29 ಜನವರಿ 2008( 20:33 IST )
ಟ್ಯಾಕ್ಸಿ ಡ್ರೈವರ್ ಒಬ್ಬನ ಮನದಾಳದ ಕನಸುಗಳನ್ನು ಕತೆಯಾಗಿ ಹೊಂದಿರುವ 'ಪಯಣ' ಚಿತ್ರ ಈಗಾಗಲೇ 21 ದಿನಗಳ ಚಿತ್ರೀಕರಣದ ಹಂತವನ್ನು ಮುಗಿಸಿದ್ದು ಮುಂದಿನ ಹಂತವಾಗಿ ಬಾದಾಮಿ, ಪಟ್ಟದಕಲ್ಲುಗಳಲ್ಲಿ ಚಿತ್ರೀಕರಣ ನಡೆಸಲು ತಂಡ ಯೋಜಿಸಿದೆ.
ಬೆಂಗಳೂರಿನ ಹೆಬ್ಬಾಳದ ಲುಂಬಿನಿ ಗಾರ್ಡನ್ ಸಮೀಪದಲ್ಲಿರುವ ಅಂಬಾಲಾ ಹೌಸ್‌ನಲ್ಲಿ ಹಾಡೊಂದರ ಚಿತ್ರೀಕರಣ ನಡೆದಾಗ ನಾಯಕ ರವಿಶಂಕರ್ ಮತ್ತು ನಾಯಕಿ ರಮಣೀತು ಚೌಧರಿ ಬಣ್ಣ ಬಣ್ಣದ ಪೋಷಾಕುಗಳನ್ನು ಧರಿಸಿ "ಆಗೋಯ್ತು ಆಗೋಯ್ತು ಏನೇನೆಲ್ಲಾ ಆಗೋಯ್ತು' ಎಂಬ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಇದಕ್ಕೆ ನಿರ್ದೇಶಕ ಕಿರಣ್ ಗೋವಿಯವರ ಸಾರಥ್ಯವಿತ್ತು ಎಂಬದನ್ನು ಹೇಳಬೇಕಿಲ್ಲವಷ್ಟೇ?
ಅಮೃತ ವರ್ಷಿಣಿ ಚಿತ್ರದಲ್ಲಿ ತಾರೆ ಸುಹಾಸಿನಿಯವರೊಂದಿಗೆ ಅದ್ಬುತವಾಗಿ ನಟಿಸಿದ ಖ್ಯಾತ ತೆಲುಗುನಟ ಶರತ್‌ಬಾಬು ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಾಶೆಣೈ, ರಂಗಾಯಣ ರಘು, ಮಂಡ್ಯ ರಮೇಶ್ ಅವರಂತಹ ಪ್ರತಿಭಾವಂತರು ಇತರ ಪೋಷಕ ಪಾತ್ರಗಳಲ್ಲಿದ್ದಾರೆ.