ನಮ್ ಏರಿಯಾ ಒಂದಿನಾ!!
ಬೆಂಗಳೂರು, ಬುಧವಾರ, 30 ಜನವರಿ 2008( 12:48 IST )
ಚಿತ್ರಕ್ಕೆ ವಿಚಿತ್ರ ಟೈಟಲ್‌ಗಳನ್ನಿಡುವ ಪರಂಪರೆ ಇನ್ನೂ ಮುಂದುವರೆದಿದೆ. ಚಿತ್ರರಸಿಕರ ಪ್ರೋತ್ಸಾಹ ಸಿಗುತ್ತಿರುವುದೂ ಇದಕ್ಕೊಂದು ಕಾರಣವಾಗಿರಬಹುದು. ಈಗ ನಾವು ಹೇಳ ಹೊರಟಿರುವುದು ನಮ್ ಏರಿಯಾ ಒಂದಿನಾ ಚಿತ್ರದ ಕುರಿತು.
ರಾಮಾಚಾರಿ, ಚಂದ್ರಾಚಾರಿ, ನಾಗೇಂದ್ರ ಜೋಯಿಸ್ ಮತ್ತು ರಾಜಶೇಖರ್ ಎಂಬ ನಾಲ್ವರು ಸ್ನೇಹಿತರು ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿ ಮೇಘನಾ ಗಾಂವ್ಕರ್. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಗೆ ಸಕತ್ ಸವಾಲ್ ಕಾರ್ಯಕ್ರಮವೂ ಸೇರಿದಂತೆ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ಅನುಭವ ಈಕೆಗಿದೆ. ಅಲ್ಲಿಗೆ ನಿರೂಪಕರು ನಟ-ನಟಿಯರಾಗುವ ಪರಂಪರೆಗೆ ಮತ್ತೊಬ್ಬರು ಸೇರಿದಂತಾಯ್ತು. ಈಗಾಗಲೇ ನಿರೂಪಕಿ ಕಾವ್ಯ ದುನಿಯಾ ವಿಜಯ್‌ರೊಂದಿಗೆ ಯುಗ ಚಿತ್ರದಲ್ಲಿ ಅಭಿನಯಿಸಿರುವುದು ನಿಮಗೆ ತಿಳಿದಿರಬಹುದು.
ಯಾವುದೇ ನಿಶ್ಚಿತ ಉದ್ಯೋಗವಿಲ್ಲದ ನಾಯಕ ಒಂದು ಪ್ರದೇಶದೊಳಗೇ ಇದ್ದುಕೊಂಡು ವಿಕ್ಷಿಪ್ತ ರೀತಿಯಲ್ಲಿ ನಡೆದುಕೊಳ್ಳುತ್ತಿರುವಾಗ ಅಲ್ಲಿ ನಡೆದ ಒಂದು ಘಟನೆ ಹೇಗೆ ಅವನ ಜೀವನಕ್ಕೆ ತಿರುವು ನೀಡುತ್ತದೆ ಎಂಬುದು ಚಿತ್ರದ ತಿರುಳಂತೆ.
ಈ ಚಿತ್ರವನ್ನು ನಿರ್ದೇಶಿಸಲಿರುವುದು ಮಂಥನ ಧಾರಾವಾಹಿಯಿಂದ ಖ್ಯಾತರಾದ ಕಿರುತೆರೆ ನಟ ಅರವಿಂದ್ ಕೌಶಿಕ್. ಈಗಾಗಲೇ ಕಿರುತೆರೆ, ಕಿರುಚಿತ್ರ ಹಾಗೂ ಜಾಹೀರಾತು ಚಿತ್ರಗಳಲ್ಲಿ ದುಡಿದ ಅನುಭವ ಅವರಿಗಿರುವುದರಿಂದ ಚಿತ್ರ ನಿರ್ದೇಶನ ಹೊರೆಯಾಗಲಾರದು ಎಂಬುದು ಬಲ್ಲವರ ಭಾವನೆ