ಹೊಂಗನಸು ಭ್ರಮ ನಿರಸನ ಉಂಟುಮಾಡಿದೆಯೇ?
ಬೆಂಗಳೂರು, ಬುಧವಾರ, 30 ಜನವರಿ 2008( 13:05 IST )
ನಿರ್ದೇಶಕ ರತ್ನಜ ನೆನಪಿರಲಿ ಚಿತ್ರದ ತಂಡವನ್ನೇ ಇಟ್ಟುಕೊಂಡು ಹೊಂಗನಸು ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗ ಜನರಲ್ಲಿ ಬಹಳಷ್ಟು ನಿರೀಕ್ಷೆಗಳಿದ್ದವು. ಕಾರಣ ಕಳೆದ ವರ್ಷ ಅದು ಫಿಲಂಫೇರ್ ಪ್ರಶಸ್ತಿಗಳನ್ನು ದೋಚಿದ್ದೇ ಅಲ್ಲದೇ ಹಂಸಲೇಖ, ನಟ ಪ್ರೇಮ್ ಇಬ್ಬರಿಗೂ ಪುನರ್ಜನ್ಮ ನೀಡಿತ್ತು.
ಆದರೆ ಅದೇ ಜಾದು ಹೊಂಗನಸು ಚಿತ್ರದಲ್ಲಿ ಮರುಕಳಿಸುವ ಸಾಧ್ಯತೆಗಳು ಕಮ್ಮಿ ಎನ್ನುತ್ತಿದ್ದಾರೆ ಚಿತ್ರ ನೋಡಿದವರು. ನೋ ಡೌಟ್, ಚಿತ್ರ ಸದಭಿರುಚಿಯಿಂದ ಕೂಡಿದೆ, ಉತ್ತಮ ಮೌಲ್ಯಗಳಿವೆ, ಒಂದೆರಡು ಒಳ್ಳೆಯ ಹಾಡುಗಳೂ ಇವೆ. ಆದರೆ ಎಲ್ಲೋ ಏನೋ ಮಿಸ್ ಆಗಿದೆಯಾ ಅನ್ನಿಸುತ್ತೆ ಎಂಬ ಅಭಿಪ್ರಾಯ ಹಲವರದು. ಆದರೆ ಅದೇನು ಎಂಬುದು ಯಾರ ಕೈನಲ್ಲೂ ಹೇಳಿಕೊಳ್ಳಲಾಗದಿರುವುದು ವಿಚಿತ್ರ.
ಈ ಚಿತ್ರದ ಯಶಸ್ಸು ನಟ ಪ್ರೇಮ್‌ರವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದೆ ಎನ್ನುವುದಂತೂ ಸತ್ಯ. ಏಕೆಂದರೆ, ನೆನಪಿರಲಿ ಮತ್ತು ಜೊತೆ ಜೊತೆಯಲಿ ನಂತರ ಅವರ ಯಾವ ಚಿತ್ರವೂ ಹಿಟ್ ಆಗಿಲ್ಲ. ಪಲ್ಲಕ್ಕಿ, ಸವಿ ಸವಿ ನೆನಪು, ಗುಣವಂತ ಚಿತ್ರಗಳ ಯಾದಿಗೆ ಹೊಂಗನಸು ಚಿತ್ರವೂ ಸೇರಿಬಿಡುತ್ತದೆಯೇ ಎಂಬ ಆತಂಕ ಅವರನ್ನು ಹಾಗೂ ಅವರ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಕೆಲವೊಂದು ಚಿತ್ರಗಳು ನಿಧಾನವಾಗಿ ಪಿಕಪ್ ಆಗುವುದರಿಂದ ಪ್ರೇಮ್ ಮತ್ತು ರತ್ನಜ ಹತಾಶರಾಗುವುದು ಬೇಡ ಎಂಬುದು ನಮ್ಮ ಹಿತೋಕ್ತಿ.