ಹಳಬರನ್ನು ಕೊಂಚ ವಿಶ್ರಾಂತಿಯಲ್ಲಿರಿಸಿರುವ ಹೊಸಬರು
ಬೆಂಗಳೂರು, ಗುರುವಾರ, 31 ಜನವರಿ 2008( 12:09 IST )
ಹೊಸನೀರು ಬಂದು ಹಳೇ ನೀರು ಕೊಚ್ಚಿಕೊಂಡು ಹೋಯ್ತು ಎಂಬುದೊಂದು ಮಾತಿದೆ. ಬದಲಾವಣೆ ಎಂಬುದು ನಿಸರ್ಗದ ನಿಯಮವಾದರೂ ಕನ್ನಡ ಚಿತ್ರರಂಗದಲ್ಲಿನ ಇಂತಹ ತೀವ್ರ ಬದಲಾವಣೆ ಹಿಂದೆಂದೂ ಕಂಡುಬಂದಿರಲಿಲ್ಲ.
ಚಿತ್ರರಂಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳು ದಾಳಿಯಿಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಯಶಸ್ಸು ಕಾಣುತ್ತಿರುವ ಚಿತ್ರಗಳನ್ನು ಅವಲೋಕಿಸಿದರೆ ಅವುಗಳಲ್ಲಿ ಹೊಸಬರ ಚಿತ್ರಗಳೇ ಹೆಚ್ಚು ಎಂಬುದು ಹೊಸ ಮುಖಕ್ಕಾಗಿ ಚಿತ್ರ ರಸಿಕರು ಹಾತೊರೆಯುತ್ತಿರುವುದನ್ನು ತೋರಿಸುತ್ತದೆ. ಒಂದು ಕಾಲದಲ್ಲಿ ಕಾಶಿನಾಥ್ ಚಿತ್ರಗಳೆಂದರೆ ಪಡ್ಡೆ ಹುಡುಗರು ಹಾತೊರೆಯುತ್ತಿದ್ದರು. ಆದರೆ ಅವರ ಅಪ್ಪಚ್ಚಿ ಚಿತ್ರ ಶೋಚನೀಯ ಸೋಲನ್ನನುಭವಿಸಿದೆ. ಇದಕ್ಕೆ ಇನ್ನೂ ಅನೇಕರ ಉದಾಹರಣೆಗಳನ್ನು ಕೊಡಬಹುದಾದರೂ ನಮ್ಮ ಉದ್ದೇಶ ಅದಲ್ಲ. ಬದಲಾಗುತ್ತಿರುವ ಜನರ ಅಭಿರುಚಿ, ನೀರೀಕ್ಷೆಗಳಿಗೆ ತಕ್ಕಂತೆ ಉದ್ಯಮದವರು ಹೊಸ ಬಗೆಯ ಚಿತ್ರಗಳನ್ನು ನೀಡದೆ, ಅದೇ ಕಾಗಕ್ಕ ಗುಬ್ಬಕ್ಕ ಮಾದರಿಯ ಕಥೆಗಳನ್ನು ನೀಡುತ್ತಿದ್ದರೆ ಇಲ್ಲವೇ ಸಿದ್ಧ ಸೂತ್ರದ ಚಿತ್ರಗಳನ್ನು ನೀಡುತ್ತಿದ್ದರೆ ಪ್ರೇಕ್ಷಕ ಒಪ್ಪಲಾರ, ಮೆಚ್ಚಲಾರ ಎಂಬುದು ಚಿತ್ರ ರಸಿಕರ ಸಲಹೆ.
ಚಿತ್ರಮಂದಿರಕ್ಕೆ ಪ್ರೇಕ್ಷಕ ಬರುವುದು ಎರಡೂವರೆ ಗಂಟೆಗಳ ಮನರಂಜನೆ ಅಪೇಕ್ಷಿಸಿ. ಅದು ತಮಾಷೆಯ ರೂಪದಲ್ಲಿರಬಹುದು, ಮನ ಮಿಡಿಯುವ ಕಥೆಯ ರೂಪದಲ್ಲಿರಬಹುದು, ರಮಣೀಯ ದೃಶ್ಯಗಳ ರೂಪದಲ್ಲಿರಬಹುದು, ಸಾಹಸ ಪ್ರಜ್ಞೆಯನ್ನು ಉದ್ದೀಪಿಸುವ ಸ್ಟಂಟ್ ದೃಶ್ಯಗಳ ರೂಪದಲ್ಲಿರಬಹುದು ಅಥವಾ ಮನಮೋಹಕ ಸಂಗೀತದ ರೂಪದಲ್ಲಿರಬಹುದು. ಒಟ್ಟಿನಲ್ಲಿ ಪ್ರೇಕ್ಷಕನಿಗೆ ಕ್ವಾಲಿಟಿ ಬೇಕಾಗಿದೆ. ಅದು ಇಲ್ಲದೆ, ಸಂತೆ ಹೊತ್ತಿಗೆ ಮೂರು ಮೊಳ ನೇಯ್ದು ಕೊಡುವ ಚಿತ್ರವನ್ನು ಆತ ಸಾರಾ ಸಗಟಾಗಿ ನಿರಾಕರಿಸುತ್ತಾನೆ, ಸ್ಟಾರ್‌ಗಳಿದ್ದರೂ ಆತ ಜಪ್ಪಯ್ಯ ಎನ್ನುವುದಿಲ್ಲ ಎಂಬುದು ಇತ್ತೀಚಿನ ಅವಲೋಕನ. ಚಿತ್ರ ನಿರೂಪಣೆಯಲ್ಲಿ ಪ್ರಾಮಾಣಿಕತೆ ಇರದಿದ್ದರೆ ನಮ್ಮ ತಿರಸ್ಕಾರ ಖಚಿತ ಎಂಬುದು ಚಿತ್ರರಸಿಕನ ಸ್ಪಷ್ಟ ನುಡಿ. ಅದು ಚಿತ್ರೋದ್ಯಮದವರಿಗೆ ಅರ್ಥವಾಗದಿದ್ದರೆ ಅದು ಅವರ ದುರಾದೃಷ್ಟ ಎಂಬುದೂ ಆತನ ಪ್ರಾಮಾಣಿಕ ನುಡಿಯೇ!!