ನವಗ್ರಹಗಳಾದ ನವನಾಯಕರು
ಬೆಂಗಳೂರು, ಗುರುವಾರ, 31 ಜನವರಿ 2008( 12:11 IST )
ನವಗ್ರಹ ಎಂದಾಕ್ಷಣ ಇದಾವುದೋ ಪೌರಾಣಿಕ ಚಿತ್ರವಿರಬೇಕು ಎಂಬ ಭಾವನೆ ಬರುವುದು ಸಹಜ. ಆದರೆ ವಿಷಯ ಅದಲ್ಲ. ಇದು ತೂಗುದೀಪ ಶ್ರೀನಿವಾಸ್ರವರ ಕುಟುಂಬ ನಿರ್ಮಿಸುತ್ತಿರುವ ಸಾಮಾಜಿಕ ಚಿತ್ರ. ನಟ ದರ್ಶನ್ ಇದರಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದರೆ, ಅವರ ಸೋದರ ದಿನಕರ್ ತೂಗುದೀಪ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್ ಚಿತ್ರದ ನಿರ್ಮಾಪಕರು. ಈ ನಿಟ್ಟಿನಲ್ಲಿ ಇದನ್ನೊಂದು ಸಂಪೂರ್ಣ ಕೌಟುಂಬಿಕ ಚಿತ್ರವೆನ್ನಬಹುದು.
ಕನ್ನಡದ ಖ್ಯಾತ ಖಳನಟರ ಮಕ್ಕಳು ಈ ಚಿತ್ರದಲ್ಲಿ ಪಾತ್ರ ವಹಿಸುತ್ತಿರುವುದು ಚಿತ್ರದ ಹೈಲೈಟ್. ಜೊತೆ ಜೊತೆಯಲಿ ಚಿತ್ರದ ಯಶಸ್ಸು ದಿನಕರ್ ಬೆನ್ನಿಗಿದೆ. ಇದು ಉತ್ಸಾಹ ತುಂಬಿರುವುದರ ಜೊತೆಗೇ ಮತ್ತಷ್ಟು ಜವಾಬ್ದಾರಿಯನ್ನೂ ಹೆಗಲಿಗೇರಿಸಿದೆ. ಏಕೆಂದರೆ ನವಗ್ರಹ ಚಿತ್ರ ನೋಡಲು ಬರುವ ಪ್ರೇಕ್ಷಕ ಜೊತೆ ಜೊತೆಯಲಿ ಚಿತ್ರಕ್ಕೂ ಮಿಗಿಲಾದ ಮನರಂಜನೆ ನಿರೀಕ್ಷಿಸುವುದು ಸಹಜ. ಇದನ್ನು ಅರಿತಿರುವ ದಿನಕರ್ ಹೆಚ್ಚಿನ ಆಸ್ಥೆಯಿಟ್ಟು ಕಥೆ-ಚಿತ್ರಕಥೆ ರಚಿಸಿದ್ದಾರಂತೆ.
ವಿನೋದ್ ಪ್ರಭಾಕರ್, ಧರ್ಮ ಕೀರ್ತಿರಾಜ್, ತರುಣ್ ಸುಧೀರ್, ನಾಗೇಂದ್ರ ಅರಸ್, ಗಿರಿ ದಿನೇಶ್, ಸೃಜನ್ ಲೋಕೇಶ್ ಚಿತ್ರದ ತಾರಾಗಣದಲ್ಲಿರುವ ಇತರರು.