ನವಶಕ್ತಿ ವೈಭವ ಯಶಸ್ಸಿನ ವೈಭವ ಸವಿಯುವುದೇ
ಬೆಂಗಳೂರು, ಗುರುವಾರ, 31 ಜನವರಿ 2008( 12:13 IST )
ಟಿವಿ ಸೆಟ್‌ಗಳ ಮುಂದೆ ಝಾಂಡಾ ಊರಿಕೊಂಡು ಕೂರುವ ಜನರನ್ನು ಚಿತ್ರಮಂದಿರಕ್ಕೆ ಆಕರ್ಷಿಸಲು ಚಿತ್ರೋದ್ಯಮದ ಪ್ರಭೃತಿಗಳು ಏನೇನೋ ಸರ್ಕಸ್ ಮಾಡುವುದುಂಟು.
ಕೆಲವು ಚಿತ್ರಗಳು ಇಂಥ ಯಾವುದೇ ಸರ್ಕಸ್ ಮಾಡದಿದ್ದರೂ ಯಶಸ್ಸು ಕಂಡರೆ, ಇನ್ನು ಕೆಲವು ಚಿತ್ರಗಳದ್ದು ಏನೇ ತಿಪ್ಪರಲಾಗ ಹಾಕಿದರೂ ಕಾಸು ಗಿಟ್ಟದ ದುರಾದೃಷ್ಟ. ಒಟ್ಟಿನಲ್ಲಿ ಚಿತ್ರ ಚೆನ್ನಾಗಿದ್ದರೆ ಇವೆಲ್ಲಾ ಅಗತ್ಯವಿಲ್ಲ ಎಂಬುದು ಚಿತ್ರರಸಿಕರ ಅಂಬೋಣ.
ಕೆಲ ವರ್ಷಗಳ ಹಿಂದೆ ತನಿಖೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಗುಲ್ಜಾರ್‌ಖಾನ್ ಪ್ರೇಕ್ಷಕರನ್ನು ಸೆಳೆಯಲು ಅವರಿಗೆ ಟಿಫನ್ ಕ್ಯಾರಿಯರ್ ಅನ್ನು ಬಹುಮಾನವಾಗಿ ನೀಡುವ ತಂತ್ರವನ್ನು ಬಳಸಿದ್ದರು. ಆದರೂ ಆ ಚಿತ್ರವೇಕೆ ಯಶಸ್ಸು ಕಾಣಲಿಲ್ಲ ಎಂಬುದು ತನಿಖೆಗೆ ಅರ್ಹವಾದ ವಿಚಾರ, ಇರಲಿ.
ಈ ವಿಷಯ ಈಗೇಕಪ್ಪಾ ಬಂತು ಅಂದ್ರೆ ಫೆಬ್ರವರಿ 1 ರಂದು ಬಿಡುಗಡೆಯಾಗುತ್ತಿರುವ ನವಶಕ್ತಿ ವೈಭವ ಎಂಬ ಚಿತ್ರದ ಬೆಳಗಿನ ಆಟಕ್ಕೆ ಬರುವ ಮಹಿಳೆಯರಿಗಾಗಿ ರಾಜ್ಯಾದ್ಯಂತದ ಚಿತ್ರಮಂದಿರಗಳಲ್ಲಿ ಉಚಿತ ಪ್ರವೇಶವನ್ನು ವ್ಯವಸ್ಥೆಗೊಳಿಸಲಾಗಿದೆಯಂತೆ. ಊಟದ ಟಿಫನ್ ಕ್ಯಾರಿಯರ್ ಕೊಟ್ಟರೆ ನಿರ್ಮಾಪಕನ ಹೊಟ್ಟೆ ಮತ್ತು ಜೇಬು ತುಂಬುತ್ತದೆ ಎಂಬ ಅಮೋಘ ಐಡಿಯಾ ಯಾರದೋ ಗೊತ್ತಿಲ್ಲ.
ಸಾಯಿಪ್ರಕಾಶ್ ನಿರ್ದೇಶನದ ಚಿತ್ರ ಅಂದ್ರೆ ತಮಾಷೀನಾ?!