ಹೀಗೊಂದು ಮಲೆನಾಡ ಮಲ್ಲಿಗೆ
ಬೆಂಗಳೂರು, ಶುಕ್ರವಾರ, 1 ಫೆಬ್ರವರಿ 2008( 11:39 IST )
ಕನ್ನಡ ಚಿತ್ರರಂಗದ ತುಂಬೆಲ್ಲಾ ಮಲ್ಲಿಗೆಯ ಘಮಲು ತುಂಬಿಕೊಳ್ಳುವಂತೆ ಕಾಣುತ್ತಿದೆ. ದಶಕಗಳ ಹಿಂದೆ ಅಶೋಕ್-ಮಂಜುಳಾ ಅಭಿನಯದಲ್ಲಿ ಮಲ್ಲಿಗೆ ಸಂಪಿಗೆ ಎಂಬ ಚಿತ್ರ ಬಂದಿತ್ತು. ಕೆಲ ವರ್ಷಗಳ ಹಿಂದೆ ನಾಗಾಭರಣ ಮೈಸೂರು ಮಲ್ಲಿಗೆ ಎಂಬ ಸುಂದರ ಚಿತ್ರವನ್ನು ನಿರ್ದೇಶಿಸಿದ್ದರು. ಅಂಬರೀಷ್ ಅಭಿನಯದಲ್ಲಿ ಮಲ್ಲಿಗೆ ಹೂವೇ ಎಂಬ ಚಿತ್ರವೂ ಬಂದಿತ್ತು. ಅದಾದ ಮೇಲೆ ಬಂದಿದ್ದು ನಾಗತಿಹಳ್ಳಿ ಚಂದ್ರಶೇಖರ್‌ರವರ ಮಾತಾಡ್ ಮಾತಾಡು ಮಲ್ಲಿಗೆ. ಈಗಾಗಲೇ ಅಂತಿಮ ಹಂತದ ಚಿತ್ರೀಕರಣ ನಡೆಸುತ್ತಿರುವ ಚಿತ್ರ ಚಿಕ್ಕಮಗಳೂರ ಚಿಕ್ಕಮಲ್ಲಿಗೆ. ಇವುಗಳ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರ ಮಲೆನಾಡ ಮಲ್ಲಿಗೆ.
ಸುಮಾರು ಒಂದೂವರೆ ದಶಕದಿಂದ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಂಚ್ಹಳ್ಳಿ ಶಿವಕುಮಾರ್ ಈಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದು ಅವರ ಚೊಚ್ಚಲ ಕಾಣಿಕೆಯೇ ಮಲೆನಾಡ ಮಲ್ಲಿಗೆ. ಈ ಚಿತ್ರಕ್ಕೆ ಸುಂದರ ಮಲೆನಾಡಿನ ಹಲವು ತಾಣಗಳಲ್ಲಿ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದೆ. ಡಬ್ಬಿಂಗ್, ರೀರೆಕಾರ್ಡಿಂಗ್ ಕಾರ್ಯಗಳೂ ಸಂಪೂರ್ಣಗೊಂಡು ಸೆನ್ಸಾರ್ ಮಂಡಳಿಯ ಅನುಮತಿಗಾಗಿ ಕಾಯಲಾಗುತ್ತಿದೆಯೆಂಬುದು ಇತ್ತೀಚಿನ ಸುದ್ದಿ.
ಖ್ಯಾತ ಉದ್ಯಮಿ ಆರ್.ಲೋಕೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಾರುತಿಯವರ ಸಂಗೀತವಿದೆ. ಡಿಫರೆಂಟ್ ಡ್ಯಾನಿಯವರದು ಸಾಹಸ ನಿರ್ದೇಶನ. ನಿತಿನ್, ಪೂರ್ವಿ, ದಕ್ಷ, ತಿಮ್ಮೇಗೌಡ, ಜೋಷಿ ಮೊದಲಾದವರ ತಾರಾಗಣವಿದೆ.