ಸದ್ದಿಲ್ಲದೆ ದುಡ್ಡು ದೋಚುತ್ತಿದೆ ಆನೆ
ಬೆಂಗಳೂರು, ಶನಿವಾರ, 2 ಫೆಬ್ರವರಿ 2008( 17:09 IST )
ದರ್ಶನ್ ಅಭಿನಯದ ಗಜ ಚಿತ್ರ ಬಿಡುಗಡೆಯಾಗುವಾಗ ಅವರ ಹಿಂದಿನ ಚಿತ್ರಗಳ ಭರಾಟೆಯಿರಲಿಲ್ಲ. ವಿನಾಕಾರಣ ಏಕೆ ಅಬ್ಬರದ ಪ್ರಚಾರ ಎಂಬುದು ಒಂದು ಕಾರಣವಾದರೆ, ಅವರ ಹಿಂದಿನ ಒಂದಷ್ಟು ಚಿತ್ರಗಳು ಸೋತದ್ದೂ ಮತ್ತೊಂದು ಕಾರಣ.
ಗಾಳಿಪಟ ಮತ್ತು ಹೊಂಗನಸು ಚಿತ್ರಗಳ ಭರಾಟೆಯಲ್ಲಿ ಗಜ ಖೆಡ್ಡಾಕ್ಕೆ ಬೀಳುತ್ತೆ ಅಂತಲೇ ಎಲ್ಲರೂ ಭಾವಿಸಿದ್ದರು. ಗಾಳಿಪಟದ ಗಣೇಶೋತ್ಸವದಲ್ಲಿ ದರ್ಶನ್ ಕಳೆದೇಹೋಗುತ್ತಾರೆ ಎಂದು ಇನ್ನು ಕೆಲವರು ನೀರೀಕ್ಷಿಸಿದ್ದರು. ಆದರೆ ತಮಾಷೆ ಗೊತ್ತಾ? ಗಜ ಚಿತ್ರ ಸದ್ದಿಲ್ಲದೇ ಹಣ ದೋಚುತ್ತಿದೆ. ಈ ಚಿತ್ರದ ಒಂದೊಂದು ಹಾಡೂ ಪ್ರೇಕ್ಷಕರನ್ನು ಎಷ್ಟೊಂದು ಹುಚ್ಚೆಬ್ಬಿಸಿದೆಯೆಂದರೆ, ಹಾಡಿಗೆ ಒನ್ಸ್‌ಮೊರ್ ಕೂಗಿದ ಉದಾಹರಣೆಗಳೂ ಇವೆ.
ಚಿತ್ರದ ಹಾಡುಗಳಲ್ಲಿ ವೈವಿಧ್ಯ ಕಾಯ್ದುಕೊಂಡಿರುವದು ಸಂಗೀತ ನಿರ್ದೇಶಕ ಹರಿಕೃಷ್ಣರ ಪ್ರತಿಭೆಗೆ ಸಾಕ್ಷಿಯಾಗಿದೆ. ಜಲ ಜಲ ಜಲಜಾಕ್ಷಿ ಹಾಡಿನ ರಿದಂ ಮತ್ತು ಚಿತ್ರೀಕರಣ ಪಡ್ಡೆ ಹುಡುಗರ ಮೆಚ್ಚಿನಗೀತೆಯಾಗಿದ್ದರೆ, ಸತ್ಯನಾರಾಯಣ ಸ್ವಾಮಿಯ ಕುರಿತಾದ ಗೀತೆ ಮನೆ ಮಂದಿಗೆಲ್ಲಾ ಇಷ್ಟವಾಗಿದೆ. ಬೆಲ್ ಹೊಡೀತಾಳೆ ಹಾಡು ಬಂದಾಗಲಂತೂ ಮಕ್ಕಳು ದೊಡ್ಡವರೆನ್ನದೆ ಚಿತ್ರಮಂದಿರದಲ್ಲಿ ಕುಳಿತ ಎಲ್ಲರೂ ಎಂಜಾಯ್ ಮಾಡುವುದನ್ನು ನೋಡುವುದೇ ಒಂದು ಹಬ್ಬ.
ರಮ್ಯ ಹೊರಾಂಗಣ, ಕಲಾವಿದರ ಅದರಲ್ಲೂ ನಾಯಕಿ ನವ್ಯಾ ನಾಯರ್‌ರವರ ತುಂಟುತನ-ಅಭಿನಯ ಎಲ್ಲರಲ್ಲೂ ಹಿಗ್ಗು ತಂದಿದೆ. ತಮ್ಮ ಫೈಟಿಂಗ್ ಹಾಗೂ ಡೈಲಾಗ್ ಡೆಲಿವರಿಯಿಂದ ದರ್ಶನ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಒಟ್ಟಿನಲ್ಲಿ ಗಜ ಮನರಂಜನೆಯ ಮೂಟೆ.
ಒಂದು ಚಿತ್ರದಿಂದ ಎಲ್ಲರೂ ಬಯಸುವುದು ಅದನ್ನೇ ಅಲ್ಲವಾ?