ಬಣ್ಣದ ಮೋಹಕ್ಕೆ ಮುಖ ಕೊಟ್ಟ ಅಜೀಂ
ಬೆಂಗಳೂರು, ಶನಿವಾರ, 2 ಫೆಬ್ರವರಿ 2008( 17:02 IST )
ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ, ಅದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬುದೊಂದು ಮಾತಿದೆ. ಜೀವನ ಪಯಣದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಂತದಲ್ಲಿ ತಾವೂ ಚಿತ್ರ ತಾರೆಯಾಗಿದ್ದಿದ್ದರೆ ಎಂದು ಕನಸು ಕಟ್ಟುವುದು ಸುಳ್ಳಲ್ಲ.
ಸರ್ಕಾರಿ ಅಧಿಕಾರಿ ಕೆ.ಶಿವರಾಂ, ನೈಸ್ ಸಂಸ್ಥೆಯ ಅಶೋಕ್ ಖೇಣಿ, ಗೀರೀಶ್ ಮಟ್ಟೆಣ್ಣನವರ್, ಇವರೆಲ್ಲಾ ಈಗಾಗಲೇ ಬಣ್ಣ ಹಚ್ಚಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರುಗಳು ಅವಸ್ಥೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮರಣ ಮೃದಂಗ, ಪ್ರಜಾಶಕ್ತಿ ಚಿತ್ರಗಳಲ್ಲಿ ಜನನಾಯಕನ ಪಾತ್ರ ವಹಿಸಿದ್ದರು. ರಮೇಶ್ ಕುಮಾರ್‌ರವರಂತೂ ಟಿ.ಎನ್.ಸೀತಾರಾಂರವರ ಮನ್ವಂತರ ಧಾರಾವಾಹಿಯ ಪ್ರಮುಖ ಪಾತ್ರಧಾರಿಯೇ ಅಗಿಹೋಗಿದ್ದರು. ಇತ್ತೀಚಿನ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಿಕ್ಕದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೊಲೀಸ್ ಅಧಿಕಾರಿಯಾಗಿದ್ದೇ ಚಿತ್ರರಂಗ ಪ್ರವೇಶಿಸಿದ ಬಿ.ಸಿ.ಪಾಟೀಲ್ ಹಲವು ಚಿತ್ರಗಳಲ್ಲಿ ನಟಿಸಿ ಈಗ ಸಕ್ರಿಯ ರಾಜಕಾರಣಿಯೇ ಆಗಿಹೋಗಿದ್ದಾರೆ.
ಈಗ ಇವರೆಲ್ಲರ ಯಾದಿಗೆ ಮಾಜಿ ಪೊಲೀಸ್ ಅಧಿಕಾರಿ, ಹಾಲಿ ರಾಜಕಾರಣಿ ಅಬ್ದುಲ್ ಅಜೀಂ ಸೇರುತ್ತಿದ್ದಾರೆ. ಇವರ ವೃತ್ತಿ ಬದುಕಿನ ಹಲವು ಘಟನಾವಳಿಗಳನ್ನು ಆಧರಿಸಿ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿರುವ ನಿಷೇಧಾಜ್ಞೆ ಚಿತ್ರದಲ್ಲಿ ಅಜೀಂ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರಂತೆ. ಈಗಾಗಲೇ ಪೊಲೀಸ್ ಅಧಿಕಾರಿಯಾಗಿ, ರಾಜಕಾರಣಿಯಾಗಿ ಎರಡು ವಿಭಿನ್ನ ವೃತ್ತಿಪರತೆಗಳನ್ನು ಮೆರೆದಿರುವ ಅಜೀಂ ಈ ಮೂರನೇ ಅವತಾರದಲ್ಲಿ ಹೇಗೆ ಮಿಂಚಲಿದ್ದಾರೆ ಎಂಬುದನ್ನು ಕಾದು ನೋಡಬೇಕು.