ಭರ್ಜರಿ ಕ್ಲೈಮ್ಯಾಕ್ಸ್‌ನ ಮಿಂಚಿನ ಓಟ
ಬೆಂಗಳೂರು, ಶನಿವಾರ, 2 ಫೆಬ್ರವರಿ 2008( 17:04 IST )
ಸಾಮಾನ್ಯವಾಗಿ ಒಂದು ಚಲನಚಿತ್ರದಲ್ಲಿ ಟೈಟಲ್‌ಕಾರ್ಡ್, ಚಿತ್ರದ ಪ್ರಾರಂಭ, ಮಧ್ಯಂತರ ಎಂಬ ಹಲವು ಹಂತಗಳಿರುವಂತೆಯೇ ಕ್ಲೈಮ್ಯಾಕ್ಸ್ ಎನ್ನುವ ಹಂತವೂ ಇರುತ್ತದೆ. ಚಿತ್ರದಲ್ಲಿ ಅದುವರೆವಿಗೂ ಹೇಳಿಕೊಂಡು ಬಂದಿದ್ದಕ್ಕೆ ಅಥವಾ ನಡೆದ ಘಟನೆಗಳಿಗೆ ಒಂದು ಸ್ಪಷ್ಟೀಕರಣವೋ ಅಥವಾ ತೀರ್ಮಾನವೋ ಅಥವಾ ಸಸ್ಪೆನ್ಸ್ ಹೊರಬೀಳುವುದೋ ಈ ಕ್ಲೈಮ್ಯಾಕ್ಸ್‌ನಲ್ಲಿಯೇ.
ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಹೆಚ್ಚೆಂದರೆ 10-15 ನಿಮಿಷ ಇರಬಹುದು. ಆದರೆ ಚಿತ್ರದ ಮೂರನೇ ಒಂದು ಭಾಗದಷ್ಟು ಕ್ಲೈಮ್ಯಾಕ್ಸೇ ಇದ್ದರೆ ಅದು ಹೇಗಿರುತ್ತೆ? ಎಂಬುದನ್ನು ಕಣ್ಣಾರೆ ನೋಡಲು ನೀವು ಮಿಂಚಿನ ಓಟ ಬಿಡುಗಡೆಯಾಗುವವರೆಗೂ ಕಾಯಬೇಕು.
ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕ್ಲೈಮ್ಯಾಕ್ಸ್ ದೃಶ್ಯ 45 ನಿಮಿಷಗಳ ಅವಧಿಯದ್ದಾಗಿದೆಯಂತೆ! ಇದು ಚಿತ್ರರಂಗದಲ್ಲೇ ಪ್ರಥಮ ಪ್ರಯತ್ನ ಎಂಬುದೊಂದು ಹೆಗ್ಗಳಿಕೆ. ಅಷ್ಟಕ್ಕೂ ಈ 45 ನಿಮಿಷದಲ್ಲಿ ಏನಿರುತ್ತದೆ ಎಂದರೆ ಹಾಡು, ಕುಣಿತ, ಚೇಸಿಂಗ್ ಎಂಬ ಉತ್ತರ ಬರುತ್ತದೆ ಚಿತ್ರತಂಡದಿಂದ. ಸೈನೈಡ್ ಚಿತ್ರವನ್ನು ನೀಡಿದ ರಮೇಶ್ ಈ ಚಿತ್ರದಿಂದ ಮತ್ತೊಂದು ರೋಮಾಂಚನ ನೀಡಲು ಹೊರಟಿದ್ದಾರೆ ಎಂದಾಯ್ತು. ನೀವು ಮಾತ್ರ ನೋಡಲು ಸಿದ್ಧರಾಗಿ!!