ಡೈನಮಿಕ್ ರಾಜಕಾರಣಕ್ಕೆ ಡೈಲಾಗ್ ಕಿಂಗ್
ಬೆಂಗಳೂರು, ಶನಿವಾರ, 2 ಫೆಬ್ರವರಿ 2008( 17:06 IST )
ತೆಲುಗುಮೂಲದ ಸಾಯಿಕುಮಾರ್ ಕನ್ನಡ ಚಿತ್ರರಸಿಕರು ಇಟ್ಟಿರುವ ಹೆಸರು ಡೈಲಾಗ್ ಕಿಂಗ್. ಬೇರೆ ಭಾಷೆಗಳಿಂದ ತೆಲುಗಿಗೆ ಚಿತ್ರಗಳು ಡಬ್ ಆಗುವಾಗ ಎಲ್ಲರೂ ಮೊರೆ ಹೋಗುವುದು ಸಾಯಿಕುಮಾರ್‌ಗೆ ಎನ್ನುವುದೇ ಅವರಿಗಿರುವ ಬೇಡಿಕೆಯನ್ನು ತೋರಿಸುತ್ತದೆ.
ರಜನೀಕಾಂತ್‌ರವರ ಬಹುತೇಕ ತಮಿಳು ಚಿತ್ರಗಳು ತೆಲುಗಿಗೆ ಡಬ್ ಆಗಿದ್ದು ಅವರಿಗೆ ಧ್ವನಿ ನೀಡಿರುವುದು ಇದೇ ಸಾಯಿಕುಮಾರ್. ಅಷ್ಟೇ ಏಕೆ ಪದ್ಮಭೂಷಣ ಡಾ| ರಾಜ್‌ಕುಮಾರ್ ನಟಿಸಿರುವ ಬಭ್ರುವಾಹನ ಚಿತ್ರದ ತೆಲುಗು ಡಬ್ ಆವೃತ್ತಿಯಲ್ಲೂ ಸಾಯಿಕುಮಾರ್‌ರವರ ಧ್ವನಿ ಮೆರೆದಿದೆ ಎಂಬುದು ವಿಶೇಷ.
ಹೀಗೆ ತೆರೆಯ ಮರೆಯಲ್ಲಿ ಹಾಗೂ ತೆರೆಯ ಮೇಲೆ ಹೂಂಕರಿಸುತ್ತಿದ್ದ ಸಾಯಿಕುಮಾರ್ ಸದ್ಯದಲ್ಲಿಯೇ ಸಾರ್ವಜನಿಕ ಸಭೆಗಳಲ್ಲಿ ಹೂಂಕರಿಸಲಿದ್ದರೆ. ಎಸ್, ನಿಮ್ಮ ಊಹೆ ಸರಿ. ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಸಾಯಿಕುಮಾರ್, ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಚಿತ್ರಗಳಲ್ಲಿ ಖಳನಾಯಕರ ವಿರುದ್ಧ ಘರ್ಜಿಸುತ್ತಿದ್ದರು, ಇಲ್ಲಿ ವಿರೋಧ ಪಕ್ಷದವರ ವಿರುದ್ಧ ಘೀಳಿಡಲಿದ್ದಾರೆ ಎಂಬುದೇ ವ್ಯತ್ಯಾಸ.