ನಾಗೇಂದ್ರ ಅರಸ್‌ರಿಂದ ರಾಕಿ
ಬೆಂಗಳೂರು, ಸೋಮವಾರ, 4 ಫೆಬ್ರವರಿ 2008( 16:02 IST )
ಚಿತ್ರರಂಗಕ್ಕೆ ಸುಂದರಕೃಷ್ಣ ಅರಸ್ ಕುಟುಂಬದ ಕೊಡುಗೆ ಕಮ್ಮಿಯೇನಿಲ್ಲ. ಸ್ವತಃ ನಟ-ನಿರ್ದೇಶಕರಾಗಿದ್ದ ಸುಂದರಕೃಷ್ಣ ಅರಸ್ ತಮ್ಮ ಕಂಚಿನ ಕಂಠದಿಂದ ಪ್ರಖ್ಯಾತರಾದವರು. ಸುರೇಶ್ ಅರಸ್, ಬಸವರಾಜ ಅರಸ್ ಸಂಕಲನ ಕಲೆಯಲ್ಲಿ ಪ್ರಸಿದ್ದಿ ಪಡೆದವರು.
ಅದೇ ಕುಟುಂದಿಂದ ಬಂದಿರುವ ನಾಗೇಂದ್ರ ಅರಸ್ ಈಗ ರಾಕಿ ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ವೃತ್ತಿಯಲ್ಲಿ ಸಂಕಲನಕಾರರಾದ ನಾಗೇಂದ್ರ ಅರಸ್ ಹಾರ್ಟ್‌ಬೀಟ್ಸ್ ಚಿತ್ರದ ನಂತರ ಯಾವುದೇ ಚಿತ್ರವನ್ನೂ ಕೈಗೆತ್ತಿಕೊಂಡಿರಲಿಲ್ಲ. ಹದಿನೈದು ಇಪ್ಪತ್ತು ದಿನಗಳಲ್ಲೇ ಚಿತ್ರ ತೆಗೆದುಕೊಡಿ ಎಂದು ಕೆಲವರು ಕೇಳಿಕೊಂಡು ಬರುತ್ತಿದ್ದುದೇ ಇದಕ್ಕೆ ಕಾರಣ.
ಈಗ ಪ್ರಾರಂಭಿಸಲಾಗಿರುವ ರಾಕಿ ಚಿತ್ರದಲ್ಲಿ, ಈ-ಟಿವಿಯ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಿಂದ ಖ್ಯಾತರಾಗಿರುವ ಯಶ್ ನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಮೋಜುಗಾರ, ಸೊಗಸುಗಾರ ನಾಯಕನಾದ ರಾಕಿ, ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುವ ರೀತಿಯಲ್ಲಿ ಪಾತ್ರಪೋಷಣೆ ಮಾಡಲಾಗಿದೆಯಂತೆ. ಈ ಚಿತ್ರಕ್ಕೆ ವೆಂಕಟ್ ನಾರಾಯಣ್ ಸಂಗೀತ ಸಂಯೋಜಿಸಿದ್ದು ಹಾಡುಗಳ ಬಗೆಗೆ ಈಗಾಗಲೇ ಒಳ್ಳೆಯ ಅಭಿಪ್ರಾಯಗಳು ಕೇಳಿಬರುತ್ತಿವೆ.