ಹಿಗ್ಗಿನ ಕನಸು ಕಾಣುತ್ತಿರುವ ಮೊಗ್ಗಿನ ಮನಸು
ಬೆಂಗಳೂರು, ಸೋಮವಾರ, 4 ಫೆಬ್ರವರಿ 2008( 16:01 IST )
ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಬಗೆಗೆ ಉದ್ಯಮದಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಮುಂಗಾರು ಮಳೆ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪನವರು ಈ ಚಿತ್ರವನ್ನು ನಿರ್ಮಿಸುತ್ತಿರುವುದು ಒಂದು ಕಾರಣವಾದರೆ, ಪ್ರಾರಂಭದಲ್ಲಿ ಕೊಂಚ ವಿವಾದಕ್ಕೆ ಈಡಾಗಿದ್ದು ಮತ್ತೊಂದು ಕಾರಣ.
ಕೆಲ ವರ್ಷಗಳ ಹಿಂದೆ ರಾಜೇಂದ್ರಸಿಂಗ್ ಬಾಬುರವರು ಟೀನ್ ಟೀನ್ ಎನ್ನುವ ಚಿತ್ರಕ್ಕೆ ಕಥೆಯೊಂದನ್ನು ಮಾಡಿಕೊಂಡಿದ್ದರಂತೆ. ಅದರಲ್ಲೂ ನಾಲ್ಕು ಹೀರೋಯಿನ್‌ಗಳಿದ್ದರಂತೆ. ಮೊಗ್ಗಿನ ಮನಸು ಚಿತ್ರದಲ್ಲೂ ನಾಲ್ಕು ಮಂದಿ ನಾಯಕಿಯರಿದ್ದು ಇದು ತಮ್ಮದೇ ಕಥೆಯಿರಬಹುದೇ ಎಂಬ ಸಂದೇಹ ಬಾಬುರವರಿಗೆ ಬಂದಿದ್ದೇ ಈ ವಿವಾದಕ್ಕೆ ಕಾರಣ. ಅದೆಲ್ಲಾ ಈಗ ಸರಿಹೋಗಿದೆ ಬಿಡಿ.
ಈಗಾಗಲೇ ರಾಕಿ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿರುವ, ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ಖ್ಯಾತಿಯ ಯಶ್ ಇದರಲ್ಲೂ ನಟಿಸಿದ್ದಾರೆ. ರಾಧಿಕಾ ಪಂಡಿತ್, ಶುಭಾ ಪೂಂಜಾ, ಸಂಗೀತಾ ಶೆಟ್ಟಿ ಹಾಗೂ ಮಾನಸಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದು ಚಿತ್ರದ ಆಕರ್ಷಣೆ ಮತ್ತು ನಿರೀಕ್ಷಣೆ ಎರಡನ್ನೂ ಹೆಚ್ಚಿಸಿದೆ.