ದುನಿಯಾ ವಿಜಿ ಈಗ ಪುಟ್ಟ
ಬೆಂಗಳೂರು, ಮಂಗಳವಾರ, 5 ಫೆಬ್ರವರಿ 2008( 14:40 IST )
ಚೆನ್ನೈ ಮೂಲದ ಪಿರಮಿಡ್ ಸಾಯಿಮೀರಾ ಸಂಸ್ಥೆ ಕನ್ನಡ ಚಿತ್ರರಂಗದಲ್ಲಿ ವೃತ್ತಿಪರ ನಿರ್ಮಾಣ ಸಂಸ್ಥೆಯಾಗಿ ಅಸ್ತಿತ್ವ ಸ್ಥಾಪಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್‌ರನ್ನು ಒಟ್ಟಿಗೆ ಸೇರಿಸಿ ಓಂ ಎಂಬ ಚಿತ್ರವನ್ನು ನಿರ್ಮಿಸಲು ಈ ಸಂಸ್ಥೆ ಈಗಾಗಲೇ ಮುಂದಾಗಿದೆ. ಜೊತೆಗೆ ಕವಿತಾ ಲಂಕೇಶ್ ನಿರ್ದೇಶನದಲ್ಲಿ ಅವ್ವ ಚಿತ್ರವನ್ನು ಈಗಾಗಲೇ ಬಿಡುಗಡೆಗೆ ಸಿದ್ಧಮಾಡಿದೆ.
ಚಿತ್ರ ನಿರ್ಮಾಣದ ಮುಂದುವರಿದ ಭಾಗವಾಗಿ ದುನಿಯಾ ವಿಜಯ್ ನಾಯಕತ್ವದಲ್ಲಿ ಪುಟ್ಟ ಎಂಬ ಚಿತ್ರ ನಿರ್ಮಿಸಲು ಹೊರಟಿದ್ದು ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಓಂಪ್ರಕಾಶ್‌ರಾವ್ ಚಿತ್ರದ ನಿರ್ದೇಶಕರು.
ಚಿತ್ರದ ಪ್ರಚಾರ ಸಾಮಗ್ರಿಯಲ್ಲಿ ಮಚ್ಚು ಹಿಡಿದು ಆಟೋರಿಕ್ಷಾಕ್ಕೆ ಒರಗಿಕೊಂಡ ವಿಜಯ್‌ರವರ ಚಿತ್ರವಿದೆ. ಅಲ್ಲಿಗೆ ಇದು ಮತ್ತೊಂದು ಮಚ್ ಅವೈಟೆಡ್ ಚಿತ್ರವೆನ್ನಬಹುದೇನೋ. ಮಚ್ಚಿನ ಚಿತ್ರಗಳಿಗೆ ಅದರಷ್ಟೇ ಹರಿತವಾದ ಸಂಭಾಷಣೆ ಬರೆಯುವಲ್ಲಿ ಸಿದ್ದಿಪಡೆದಿರುವ ಎಂ.ಎಸ್.ರಮೇಶ್ ಇದ್ದಾರೆಂದ ಮೇಲೆ ಮಾತಲ್ಲೇ ರಕ್ತದೋಕುಳಿ ಗ್ಯಾರಂಟಿ ಎಂಬುದು ಸದ್ಯದ ನೀರೀಕ್ಷೆ.
ಚಿತ್ರ ಬಿಡುಗಡೆಯಾದ ಮೇಲೆ ಮಿಕ್ಕಿದ್ದು!!