ಮಿಲನವಾಯ್ತು, ಇನ್ನೇನಿದ್ದರೂ ಬಿಂದಾಸ್
ಬೆಂಗಳೂರು, ಮಂಗಳವಾರ, 5 ಫೆಬ್ರವರಿ 2008( 14:38 IST )
ಪುನೀತ್ ರಾಜ್‌ಕುಮಾರ್ ಚಿತ್ರಗಳ ಕುರಿತು ಒಂದು ವಿಶೇಷತೆಯಿದೆ. ಅದೇನೆಂದರೆ, ಅವರ ಬಾಡಿ ಲಾಂಗ್ವೇಜ್ ನೋಡಿದಾಗ ಇವರದು ಸಾಹಸ ಪ್ರಧಾನ ಚಿತ್ರಗಳಿಗೆ ಲಾಯಕ್ಕಾದ ಮೈಕಟ್ಟು ಎನಿಸುತ್ತದೆ. ಆದರೆ ಮಹಿಳಾ ಪ್ರೇಕ್ಷಕರನ್ನು ತುಂಬಾ ಚೆನ್ನಾಗಿ ಆಕರ್ಷಿಸುತ್ತದೆ. ಅವರ ಅಭಿನಯದ ಆಕಾಶ್, ಅಭಿ, ಅರಸು ಹಾಗೂ ಮಿಲನ ಚಿತ್ರಗಳಿಗೆ ಮಹಿಳಾ ಪ್ರೇಕ್ಷಕರ ದಂಡೇ ಬರುತ್ತಿದ್ದುದು ಇದಕ್ಕೆ ಸಾಕ್ಷಿ. ಅದರಲ್ಲೂ ಇತ್ತೀಚಿನ ಮಿಲನ ಚಿತ್ರವಂತೂ ಹೆಂಗೆಳೆಯರ ಮತ್ತು ಮಕ್ಕಳ ಅಚ್ಚುಮೆಚ್ಚಿನ ಚಿತ್ರವಾಗಿದ್ದು 150 ದಿನಗಳನ್ನು ಸಮೀಪಿಸುತ್ತಿದೆ.
ಮಿಲನ ಆಯ್ತು, ಮುಂದೇನು ಏನು? ಎಂದು ಕೇಳುವವರಿಗೆ ಉತ್ತರ ರೂಪವಾಗಿ ಬಿಂದಾಸ್ ಸಿದ್ಧವಾಗಿದೆ. ಬಿಡುಗಡೆಯಾಗಬೇಕಿರುವುದು ಬಾಕಿ. ಈ ಕುರಿತು ಚಿತ್ರರಸಿಕರಲ್ಲಿ ನೀರೀಕ್ಷೆ ಹೆಚ್ಚಾಗಿದೆ. ಏಕೆಂದರೆ ಗಾಳಿಪಟ ಚಿತ್ರದಲ್ಲಿ ಅಭಿನಯಿಸಲು ಪುನೀತ್‌ಗೆ ಕರೆ ಬಂದಾಗ, ಬಿಂದಾಸ್ ಬಿಡುಗಡೆಗೆ ತೊಂದರೆಯಗುತ್ತದೆ ಎಂಬ ಒಂದೇ ಕಾರಣಕ್ಕೆ ಆ ಆಫರ್ ಅನ್ನು ಅವರು ಒಪ್ಪಿಕೊಳ್ಳಲಿಲ್ಲ. ತಮ್ಮ ಪಾತ್ರದ ಕುರಿತಾದ ವಿಶ್ವಾಸ ಹಾಗೂ ತಮ್ಮದೇ ಎರಡೂ ಚಿತ್ರಗಳ ನಡುವೆ ಕ್ಲಾಶ್ ಆಗಬಾರದೆಂಬ ಮನೋಭಾವ ಅವರದು ಎನ್ನುವಾಗ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂಬುದೇ ಎಲ್ಲರ ಕುತೂಹಲ.
ಇದರ ಜೊತೆಗೆ ಗುರುಕಿರಣ್‌ರವರ ಫುಟ್ ಟ್ಯಾಪಿಂಗ್ ಟ್ಯೂನ್ ಎಲ್ಲರನ್ನೂ ಆಕರ್ಷಿಸುತ್ತಿದೆ. ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ ಎಂಬ ಹಾಡನ್ನು ಮನೆಮಂದಿಯೆಲ್ಲಾ ತುಂಬಾ ಆನಂದಿಸುತ್ತಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಹನ್ಸಿಕಾ ಒಂದು ಕಾಲಕ್ಕೆ ಸ್ಟಾರ್ ಪ್ಲಸ್ ಧಾರಾವಾಹಿಗಳಲ್ಲಿ ಬಾಲನಟಿಯಾಗಿದ್ದವರು. ಅರುಣಾ ಇರಾನಿ ನಿರ್ದೇಶನದ ದೇಸ್ ಮೇ ನಿಕಲಾ ಹೋಗಾ ಚಾಂದ್ ಎಂಬ ಧಾರಾವಾಹಿಯಲ್ಲಿ ಈಕೆ ಅದ್ಬುತ ಅಭಿನಯ ನೀಡಿದ್ದರು ಎಂಬುದನ್ನು ಯಾರೂ ಮರೆಯಲಾರರು.
ಬಿಂದಾಸ್ ಚಿತ್ರಕ್ಕೆ ನಿಮಗೀಗಲೇ ಬಿಂದಾಸ್ ಆಹ್ವಾನ! ಬನ್ನಿ ಎಂಜಾಯ್ ಮಾಡಿ.