ಜನಪದ ರಸಿಕರಿಗೆ ಜಾನಪದ ಲೋಕೋತ್ಸವ
ಬೆಂಗಳೂರು, ಬುಧವಾರ, 6 ಫೆಬ್ರವರಿ 2008( 14:36 IST )
ಕಲೆ, ಸಾಹಿತ್ಯ, ಸಂಸ್ಕ್ಕತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ಈ ತಿಂಗಳ 8ರಿಂದ 10ರ ವರೆಗೆ ಜಾನಪದ ಲೋಕೋತ್ಸವವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಭಾಗವಹಿಸಲಿದ್ದು, ಹಲವು ರೀತಿಯ ಕಲಾಪ್ರಕಾರಗಳೊಂದಿಗೆ ಜನರನ್ನು ರಂಜಿಸಲಿದೆ ಎಂದು ಪರಿಷತ್ತು ಅಧ್ಯಕ್ಷ ನಾಡೋಜ ಜಿ. ನಾರಾಯಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂರು ದಿನಗಳ ಉತ್ಸವದಲ್ಲಿ ಹೊರರಾಜ್ಯಗಳ ಜಾನಪದ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಕನ್ನಡ ಜಾನಪದದ ಮೇರು ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಗಳ ಸಹಯೋಗದಲ್ಲಿ ನಡೆಯಲಿರುವ ಲೋಕೋತ್ಸವದಲ್ಲಿ ಬೇಡರ ಪಡೆ ಕುಣಿತ, ಗೊಂಡರ ದುಡಿ ಕುಣಿತ, ಕಂಸಾಳೆ, ಯಕ್ಷಗಾನ, ಜನಪದ ನೃತ್ಯ ರೂಪಕ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಜನಪದ ರಸಿಕರಿಗೆ ಮನೋರಂಜನೆ ನೀಡಲಿದೆ ಎಂದು ವಿವರಿಸಿದರು.