ಸುದೀಪ್ ಎಂಬ ಗೂಳಿ ಬರ್ತಿದೇ.. ಜಾಗಬಿಡಿ!
ಬೆಂಗಳೂರು, ಬುಧವಾರ, 6 ಫೆಬ್ರವರಿ 2008( 14:39 IST )
ನಟ ಸುದೀಪ್‌ರನ್ನು ಹಿಂದಿ ಚಿತ್ರನಟ ಅಮೀರ್‌ಖಾನ್‌ಗೆ ಹೋಲಿಸಬಹುದು. ಏಕೆಂದರೆ ಅವರೂ ಪರ್ಫೆಕ್ಷನಿಸ್ಟ್, ಇವರೂ ಪರ್ಫೆಕ್ಷನಿಸ್ಟ್. ತಮ್ಮ ನಿರೀಕ್ಷೆಗೆ ತಕ್ಕಂತೆ ದೃಶ್ಯ ಮೂಡುವವರೆಗೂ ಇಬ್ಬರಿಗೂ ಸಮಾಧಾನವಿರುವುದಿಲ್ಲ. ಈ ಕಾರಣದಿಂದಲೇ ಇತರರು ಇವರಿಬರನ್ನೂ ತಪ್ಪಾಗಿ ಭಾವಿಸಿದ್ದೂ ಇದೆ, ಇರಲಿ.
ಮೈ ಆಟೋಗ್ರಾಫ್ ಚಿತ್ರದ ನಂತರ ಶಾಂತಿನಿವಾಸ ಚಿತ್ರವನ್ನು ಅತ್ಯಂತ ಪ್ರೀತಿಯಿಂದ ನಿರ್ಮಿಸಿ ನಿರ್ದೇಶಿಸಿದ್ದರು. ರೋಮ್ಯಾಂಟಿಕ್ ನಟ ರಾಜೇಶ್‌ಖನ್ನಾ ಹಿಂದಿಯಲ್ಲಿ ಅಭಿನಯಿಸಿದ್ದ ಬಾವರ್ಚಿ ಚಿತ್ರದ ಪುನರ್ ಸೃಷ್ಟಿಯಾಗಿತ್ತದು. ತುಂಬಾ ಕ್ಲಾಸಿಕ್ ಅಗಿ ರೂಪುಗೊಂಡಿದ್ದ ಆ ಚಿತ್ರ ಅದೇಕೋ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಇದಾದ ನಂತರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸಿದರಾದರೂ, ಚಿತ್ರವೇ ಸೋತಿದ್ದರಿಂದ ಸುದೀಪ್ ಶ್ರಮ ವ್ಯರ್ಥವಾಯಿತು.
ಈಗ ಗೂಳಿ ಚಿತ್ರದ ಮೂಲಕ ಮತ್ತದೇ ಢಿಶುಂ ಢಿಶುಂ ಟ್ರಾಕ್‌ಗೆ ಸುದೀಪ್ ಮರಳಿದ್ದು, ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಇಂಥ ಚಿತ್ರಗಳ ನಿರ್ಮಾಣಕ್ಕೆ ರಾಮು ಪ್ರಸಿದ್ಧರು, ಇಂಥ ಚಿತ್ರಗಳ ನಿರ್ದೇಶನದಲ್ಲಿ ಪಿ.ಸತ್ಯಾ ಸಿದ್ಧಹಸ್ತರು. ಹಾಗಾಗಿ ನಿರಾಸೆಗೆ ಅವಕಾಶವಿಲ್ಲ ಎಂಬುದು ಅಭಿಮಾನಿಗಳ ನಂಬುಗೆ. ಜೊತೆಗೆ ರಾಮುರವರ ನಿರ್ಮಾಣದ ಮಲ್ಲ ಚಿತ್ರವನ್ನು ಬಿಟ್ಟರೆ ಅವರ ಇತ್ತೀಚಿನ ಚಿತ್ರಗಳಾವುವೂ ಅವರಿಗೆ ಲಾಭ ತಂದುಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಗೂಳಿ ಚಿತ್ರವನ್ನು ರಾಮು ಶ್ರದ್ದೆಯಿಂದಲೇ ನಿರ್ಮಿಸಿರುತ್ತಾರೆ ಎಂಬುದು ಉದ್ಯಮದ ವಿಶ್ವಾಸ.
ವಿಶ್ವಾಸ ಚಿರಾಯುವಾಗಲಿ. ಸುದೀಪ್ ಮತ್ತೊಮ್ಮೆ ಮುಖ್ಯವಾಹಿನಿಗೆ ಬರಲಿ. ರಾಮು ಮತ್ತಷ್ಟು ನಗಲಿ.