ಓಂಕಾರಕ್ಕೆ ನೂರರ ಸಂಭ್ರಮ
ಬೆಂಗಳೂರು, ಗುರುವಾರ, 7 ಫೆಬ್ರವರಿ 2008( 12:58 IST )
ನೂರು ಎಂಬ ಸಂಖ್ಯೆಯಲ್ಲೇ ಅದೇನೋ ಮಾಯೆ ಇದೆ ಕಣ್ರೀ. ಕ್ರಿಕೆಟ್‌ನಲ್ಲಿ ಸೆಂಚುರಿ ಬಾರಿಸ್ತಾರೆ, ಜೀವನದಲ್ಲಿ ಶತಾಯುಷಿಗಳಾಗ್ತಾರೆ, ಚಲನಚಿತ್ರ ನೂರು ದಿವ್ಸ ಓಡುತ್ತೆ.. ಹೀಗೆ ಒಂದಾ ಎರಡಾ? ಒಟ್ಟಿನಲ್ಲಿ ಸಂಭ್ರಮಕ್ಕೊಂದು ಪರ್ಯಾಯ ಪದ ನೂರು. ಅದೀಗ ಓಂಕಾರ ಧಾರಾವಾಹಿಯ ಪಾಲಾಗಿದೆ.
ಎಸ್; ನಿಮ್ಮ ಊಹೆ ನಿಜ. ಎಲ್ಲರೂ ಖಾಸಗಿ ವಾಹಿನಿಗಳ ಕಡೆಗೇ ಮುಖ ಮಾಡಿಕೊಂಡಿರುವಾಗ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಓಂಕಾರ ಎಂಬ ಮೆಗಾ ಧಾರಾವಾಹಿ ನೂರು ದಿನ ಪೂರೈಸುವುದೆಂದರೆ ಅದು ಸಾಮಾನ್ಯದ ಮಾತಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7-15ಕ್ಕೆ ಮತ್ತು ಚಂದನದಲ್ಲಿ ರಾತ್ರಿ 8-45ಕ್ಕೆ ಪ್ರಸಾರವಾಗುವ ಈ ಧಾರಾವಾಹಿಯದು ಸಂಗೀತದ ಹಿನ್ನೆಲೆ ಹೊಂದಿದ ಕಥೆ.
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವ ನಾಯಕ-ನಾಯಕಿಯರ ಜೀವನದಲ್ಲಿ ಪ್ರವೇಶಿಸುವ ಅಸೂಯೆ-ಅಹಂಕಾರ ಏನೆಲ್ಲಾ ತಿರುವುಗಳಿಗೆ ಕಾರಣವಾಗುತ್ತದೆ ಎಂಬುದು ಧಾರಾವಾಹಿಯ ತಿರುಳು. ಕಥೆ ಕೇಳಿದಾಗ ಎಪ್ಪತ್ತರ ದಶಕದಲ್ಲಿ ಬಂದ ಅಮಿತಾಭ್-ಜಯಾ ಬಚ್ಚನ್ ಅಭಿನಯದ ಅಭಿಮಾನ್ ಹಿಂದಿ ಚಿತ್ರ ನಿಮಗೆ ನೆನಪಿಗೆ ಬರಬಹುದು. ಪಾತ್ರವೊಂದನ್ನು ನಿರ್ವಹಿಸುವುದರ ಜೊತೆಗೆ ಇದರ ನಿರ್ದೇಶನದ ಹೊಣೆ ಹೊತ್ತಿರುವವರು ಅಮಿತ್ ಬುಲ್ಬುಲೆ. ಅರವಿಂದ್, ಬ್ಯಾಂಕ್ ಜನಾರ್ಧನ್, ಎಂ.ಎಸ್.ಉಮೇಶ್ ಇತರ ಪಾತ್ರಗಳಲ್ಲಿದ್ದಾರೆ.
ಅಮಿತ್ರಿಗೊಂದು ಕಂಗ್ರಾಟ್ಸ್ ಹೇಳಬಹುದು ಅಲ್ವಾ?