ಜನಾ ಛೇಂಜ್ ಕೇಳ್ತಾರೆ ಸ್ವಾಮೀ..!!
ಬೆಂಗಳೂರು, ಗುರುವಾರ, 7 ಫೆಬ್ರವರಿ 2008( 13:04 IST )
ಇದು ಒಂದು ಸಿನಿಮಾ ಕಥೆ ಚಿತ್ರದಲ್ಲಿ ರಮೇಶ್ ಉದುರಿಸುವ ಡೈಲಾಗು. ಇದು ನಿಜವೂ ಕೂಡಾ. ಏಕತಾನತೆ ಎನ್ನುವುದು ಆಕಳಿಕೆಗಿರುವ ಪರ್ಯಾಯ ಪದ ಎಂಬ ಮಾತನ್ನು ನಂಬುವುದಾದರೆ ಬದಲಾವಣೆಯನ್ನು ನೀವು ಮೆಚ್ಚಬಲ್ಲಿರಿ. ಬದಲಾವಣೆಯನ್ನು ತರಲು ಚಿತ್ರರಂಗದವರು ಕಾಲಾನುಕಾಲಕ್ಕೆ ಅವರದೇ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಬಿಡಿ, ಅದೇನೂ ಹೊಸದಲ್ಲ.
ವಿಷಯ ಅದಲ್ಲ. ಯಾರಾದರೊಬ್ಬರು ತಮ್ಮದಲ್ಲದ ಅಥವಾ ಅಪರೂಪದ ಕ್ಷೇತ್ರವನ್ನು ಪ್ರವೇಶಿಸಿದಾಗ ಅವರ ಕುರಿತು ಒಂದಷ್ಟು ಆಸಕ್ತಿ-ಕುತೂಹಲ ಇರುತ್ತದೆ. ಸಾಹಿತಿಗಳು, ಇತರ ಕ್ಷೇತ್ರಗಳ ಗಣ್ಯರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಬಗ್ಗೆ ಇದೊಂದು ಪುಟ್ಟ ಮಾಹಿತಿ ಅಷ್ಟೇ.
70ರ ದಶಕದಲ್ಲಿ ಕನ್ನಡ ಚಿತ್ರರಂಗದ ಕಡೆಗೆ ಇತರ ಭಾಷಿಕರೂ ಹೆಮ್ಮೆಯಿಂದ ನೋಡುವಂತೆ ಮಾಡಿದ ಸಂಸ್ಕಾರ ಚಿತ್ರದಲ್ಲಿ ಖ್ಯಾತ ಸಾಹಿತಿ ಹಾಗೂ ಪತ್ರಕರ್ತ ಪಿ.ಲಂಕೇಶ್‌ರವರು ನಾರಾಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುಂಚೆ ಬಂದ ಚಕ್ರತೀರ್ಥ ಚಿತ್ರದಲ್ಲಿ, ಆ ಕಾದಂಬರಿಯ ಕರ್ತೃ ತ.ರಾ.ಸುಬ್ಬರಾವ್ ಚಿತ್ರದ ಆರಂಭದ ದೃಶ್ಯದಲ್ಲಿಯೇ ಕಾಣಿಸಿಕೊಂಡಿದ್ದರು.
ಮಕ್ಕಳೇ ದೇವರು ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ಕ್ರಿಕೆಟ್ ಪಟು ಜಿ.ಆರ್.ವಿಶ್ವನಾಥ್ ಹಲವು ವರ್ಷಗಳ ನಂತರ ಕುಮಾರ್ ಬಂಗಾರಪ್ಪ ಅಭಿನಯದ ನವತಾರೆ ಚಿತ್ರದಲ್ಲಿಯೂ ಕ್ರಿಕೆಟರ್ ಆಗಿಯೇ ಕಾಣಿಸಿಕೊಂಡಿದ್ದರು. ಡಾ| ವಿಷ್ಣುವರ್ಧನ್ ಅಭಿನಯದ ಸುಪ್ರಭಾತ ಚಿತ್ರದಲ್ಲಿ ಖ್ಯಾತ ವಿಕೆಟ್ ಕೀಪರ್ ಸದಾನಂದ ವಿಶ್ವನಾಥ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆ ಪಾತ್ರ ವಿಜಯಕಾಶಿಯವರ ಪಾಲಾಯ್ತು ಎಂಬುದನ್ನು ಪತ್ರಿಕೆಗಳಲ್ಲಿ ಓದಿದ್ದ ನೆನಪು.
ಕಾಡುಕುದುರಿ ಓಡಿಬಂದಿತ್ತಾ ಎನ್ನುತ್ತಾ ತಮ್ಮದೇ ಧಾಟಿಯ ಹಾಡುಗಳನ್ನು ಬರೆಯುತ್ತಾ ಚಿತ್ರರಸಿಕರನ್ನು ಕಾಡುಕುದುರೆ ಚಿತ್ರದಲ್ಲಿ ಆಕರ್ಷಿಸಿದ್ದ ಚಂದ್ರಶೇಖರ ಕಂಬಾರರು ಈಗ ಬೆಳದಿಂಗಳಾಗಿ ಬಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಯವರು ಮರುಜನ್ಮ ಮತ್ತು ಮಚ್ಚ ಎಂಬೆರಡು ಚಿತ್ರಗಳಲ್ಲಿ ಕಾಣಿಸಿಕೊಂಡಿರುವುದು ಇತ್ತೀಚಿನ ಸುದ್ದಿ.
ಬದಲಾವಣೆ ಇದ್ದರೆ ಒಂಥರಾ ಖುಷಿ ಇರುತ್ತೆ. ನೀವೇನಂತೀರಾ?