'ಸ್ಲಂ ಬಾಲ' ಚಿತ್ರ ನಿರ್ದೇಶಿಸಲಿರುವ ಪತ್ರಕರ್ತೆ
ಬೆಂಗಳೂರು, ಶುಕ್ರವಾರ, 8 ಫೆಬ್ರವರಿ 2008( 12:15 IST )
ಸುಮಾರು ಹತ್ತು ವರ್ಷದ ಹಿಂದೆ ಅಭಿನಯ ಶಾರದೆ ಜಯಂತಿ, ಏನ್ ಸ್ವಾಮಿ ಅಳಿಯಂದ್ರೇ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಕವಿತಾ ಲಂಕೇಶ್, ವಿಜಯಲಕ್ಷ್ಮೀ ಸಿಂಗ್ ಮೊದಲಾದವರು ಚಿತ್ರ ನಿರ್ದೇಶನಕ್ಕೆ ಇಳಿದಿರುವುದನ್ನು ಈಗಾಗಲೇ ನೀವು ತಿಳಿದಿದ್ದೀರಿ. ಈ ಮಹಿಳೆಯರ ಸಾಲಿಗೆ ಈಗ ಸೇರುತ್ತಿರುವವರು ಸುಮನಾ ಕಿತ್ತೂರು.
ಅಗ್ನಿ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಪತ್ರಕರ್ತೆ ಕ್ರಮೇಣ ಆ ದಿನಗಳು ಚಿತ್ರದಲ್ಲಿ ಸಹ ನಿರ್ದೇಶಕಿಯಾಗಿ ತಮ್ಮನ್ನು ತೊಡಗಿಸಿಕೊಂಡರು. ಈ ಚಿತ್ರ ಸೂಪರ್ ಹಿಟ್ ಆಗಿರುವುದು ನಿಮಗೆ ಗೊತ್ತು. ಇದರ ಯಶಸ್ಸಿನಿಂದ ಪ್ರೇರಿತರಾಗಿರುವ ಸುಮನಾ ಈಗ ಸ್ವತಂತ್ರ ನಿರ್ದೇಶಕಿಯಾಗುತ್ತಿದ್ದಾರೆ. ಸ್ಲಂ ಬಾಲ ಎಂಬ ಹೆಸರಿನ ಈ ಚಿತ್ರದಲ್ಲಿ ದುನಿಯಾ ವಿಜಯ್ ಹೀರೋ, ಶುಭಾ ಪೂಂಜಾ ಹೀರೋಯಿನ್.
ಸ್ಲಂನಲ್ಲಿ ಬೆಳೆಯುವ ಒರಟು ಸ್ವಭಾವದ ಹುಡುಗ ಅಲ್ಲಿನ ಜನ ಸಮುದಾಯದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವುದರ ಜೊತೆಗೇ ಬಂಡಾಯದ ವ್ಯಕ್ತಿತ್ವವನ್ನೂ ಬಿಂಬಿಸುವುದು ಕಥೆಯ ವೈಶಿಷ್ಟ್ಯವಂತೆ. ಚಿತ್ರದಲ್ಲಿ ಎರಡೇ ಹಾಡುಗಳಿದ್ದು, ಅದಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ ಎಂಬುದು ಇತ್ತೀಚಿನ ಸುದ್ದಿ. ಅಗ್ನಿ ಶ್ರೀಧರ್ ಅವರೇ ಕಥೆ-ಸಂಭಾಷಣೆ ಬರೆದಿದ್ದು, ಚಿತ್ರಕಥೆಯನ್ನು ಶ್ರೀಧರ್ ಮತ್ತು ಸುಮನಾ ಕಿತ್ತೂರು ಬರೆದಿದ್ದಾರಂತೆ.